ಎಸ್ ಐ ಆರ್ ಪ್ರಕ್ರಿಯೆಯ ಕುರಿತು ಫೆ ೨ ರಂದು ಖಾಸಗಿ ಹೊಟೆಲ್‌ನಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ

ಕನ್ನಡಪ್ರಭವಾರ್ತೆ ತುರುವೇಕೆರೆ

ಚುನಾವಣಾ ಆಯೋಗ ದೇಶಾದ್ಯಂತ ಜಾರಿಗೆ ತರಲು ಮುಂದಾಗಿರುವ ಎಸ್ ಐ ಆರ್ ಪ್ರಕ್ರಿಯೆಯ ಕುರಿತು ಫೆ ೨ ರಂದು ಸೋಮವಾರ ಎದ್ದೇಳು ಕರ್ನಾಟಕ, ಸಂವಿಧಾನ ಸಂರಕ್ಷಣಾ ಪಡೆ. ಭೀಮೋತ್ಸವ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಖಾಸಗಿ ಹೊಟೆಲ್‌ನಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೀಮೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ನೆಮ್ಮದಿ ಗ್ರಾಮ ಮೂರ್ತಿ ತಿಳಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಎಸ್ ಐ ಆರ್ ಪ್ರಕ್ರಿಯೆ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಹತ್ತಾರು ವರ್ಷಗಳಿಂದ ಮತದಾನ ಮಾಡಿರುವ ಮತದಾರ ಪ್ರಭುವಿಗೆ ಈ ಪ್ರಕ್ರಿಯೆ ತಲೆನೋವಾಗಿದೆ. ಈಗಾಗಲೇ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಈಗ ನೂರೆಂಟು ಗೊಂದಲಗಳನ್ನು ಹುಟ್ಟು ಹಾಕಿರುವ ಎಸ್ ಐ ಆರ್ ನ್ನು ಜಾರಿಗೆ ತರಲು ಚುನಾವಣಾ ಆಯೋಗ ಮುಂದಾದರೆ ಜನರು ಈಗೊಡವೆಯೇ ಬೇಡವೆಂದು ಸುಮ್ಮನಾಗುತ್ತಾರೆ. ಇದರಿಂದಾಗಿ ಸಹಜವಾಗಿ ಮತದಾರರ ಹೆಸರು ಕಡಿಮೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಯಜಮಾನ್ ಮಹೇಶ್ ಮಾತನಾಡಿ, ಈಗಾಗಲೇ ಪಟ್ಟಣದಲ್ಲಿ ೧೪ ವಾರ್ಡ್ ಗಳು ಇದ್ದು ಸುಮಾರು ೧೫ ಸಾವಿರ ಮತದಾರರು ಇದ್ದರು. ಈಗಾಗಲೇ ಎಸ್ ಐ ಆರ್ ಪ್ರಕ್ರಿಯೆ ನಡೆಯುತ್ತಿರುವುದರಿಂದ ಸಾಕಷ್ಟು ಮಂದಿ ಮತದಾರರ ಪಟ್ಟಿಯಿಂದ ಹೊರಗುಳಿಯುವ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಡಿ ಎಸ್ ಎಸ್ ಡಾ.ಅಂಬೇಡ್ಕರ್ ವಾದದ ತಾಲೂಕು ಸಂಚಾಲಕ ಬಾಣಸಂದ್ರ ಕೃಷ್ಣ ಮಾದಿಗ ಮಾತನಾಡಿ, ಎಸ್ ಐ ಆರ್ ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಫೆ ೨ ರಂದು ಖ್ಯಾತ ಅಂಕಣಕಾರರು, ಚಿಂತಕರು ಹಾಗೂ ಸಾಹಿತಿಗಳಾದ ಎಚ್.ಎಸ್.ಶಿವಸುಂದರ್ ರವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ತಾಲೂಕಿನ ಸಾರ್ವಜನಿಕರು, ಮತದಾರ ಬಂಧುಗಳು ಆಗಮಿಸಿ ಎಸ್ ಐ ಆರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕೆಂದು ಮನವಿ ಮಾಡಿದರು. ಈ ವೇಳೆ ಮುಖಂಡರಾದ ಮಾಯಸಂದ್ರ ಸುಬ್ಬಣ್ಣ, ಬಾಣಸಂದ್ರ ಲಕ್ಷ್ಮೀದೇವಮ್ಮ, ಬಡಾವಣೆ ಸುನಿಲ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್, ಎಸ್ ಎಫ್ ಐ ಮುಖಂಡ ಟಿ.ಎಚ್.ಸತೀಶ್, ಫೋಟೋ ಮಹೇಂದ್ರ, ದಬ್ಬೇಘಟ್ಟ ಪುಟ್ಟಣ್ಣ, ನಿವೃತ್ತ ಶಿಕ್ಷಕ ಚಂದ್ರಣ್ಣ, ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.