ಸಾರಾಂಶ
ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜನೆ: ಬಿ.ಡಿ. ಸಾವಕ್ಕನವರ ಮಾಹಿತಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಕುರಿತು, ಒಳ ಮೀಸಲಾತಿಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಸೆ.26ರಂದು ಬೆಳಗ್ಗೆ 10ಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿಗಳ ಮೀಸಲಾತಿ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಬಿ.ಡಿ. ಸಾವಕ್ಕನವರ ಹೇಳಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಸಾವಿರಾರು ವರ್ಷಗಳಿಂದ ಶೋಷಣೆ, ದೌರ್ಜನ್ಯ, ಹಿಂಸೆ, ಸಾಮಾಜಿಕ ಬಹಿಷ್ಕಾರಗಳನ್ನು ಅನುಭವಿಸುತ್ತಲೇ ಬಂದಿರುವ ಪರಿಶಿಷ್ಟ ಜಾತಿಗಳು ಶೇ.15ರಷ್ಟು ಮೀಸಲಾತಿಯನ್ನು ಉಳಿದ ಸಮುದಾಯಗಳ ಜೊತೆ ಹಂಚಿಕೊಳ್ಳುತ್ತಿದೆ. ಆದರೆ, ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಅಸ್ಪೃಶ್ಯರಲ್ಲದ ಸಮುದಾಯಗಳು ಸೇರಿ ಒಟ್ಟಾರೆ 101 ಜಾತಿಗಳಿವೆ. ಇದರೊಳಗೆ ಬಲಾಢ್ಯ ಸಮುದಾಯಗಳೇ ಹೆಚ್ಚು ಮೀಸಲಾತಿ ಪಡೆದುಕೊಂಡಿವೆ ಎಂದರು.ಅಸ್ಪೃಶ್ಯ ಸಮುದಾಯಗಳಾದ ಹೊಲೆಯರು, ಮಾದಿಗರು ಮತ್ತು ಅವರ ಸಂಬಂಧಿತ ಜಾತಿಗಳು ಮೀಸಲಾತಿ ಪಡೆಯುವಲ್ಲಿ ವಂಚಿತವಾಗಿದ್ದವು. ಇದರ ವಿರುದ್ಧ ಸುಮಾರು 35 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಇದರ ಪರಿಣಾಮವಾಗಿ ಸದಾಶಿವ ಆಯೋಗ ರಚನೆಯಾಯಿತು. ಅದು ವರದಿಯನ್ನೂ ನೀಡಿತು. ಆದರೆ ಸರ್ಕಾರಗಳು ಆ ವರದಿಯನ್ನ ಜಾರಿಗೆ ತರಲಿಲ್ಲ. ಇದರ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಹೋಗಲಾಯಿತು. ಇದೀಗ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಎಲ್ಲಾ ಜಾತಿಗಳ ನಡುವೆ ಸಮಾನತೆ ಸಾಧಿಸಬೇಕಾಗಿರುವುದರಿಂದ ಮೀಸಲಾತಿ ವರ್ಗೀಕರಣ ಮಾಡಬಹುದಾಗಿದೆ. ಈ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ತೀರ್ಪು ನೀಡುವ ಮೂಲಕ ಸದಾಶಿವ ಆಯೋಗದ ವರದಿ ಎತ್ತಿ ಹಿಡಿದಿದೆ ಎಂದು ತಿಳಿಸದರು.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಮಾತು ಕೊಟ್ಟಂತೆ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಮಾಡಬೇಕು. ಆ ಮೂಲಕ ಅಸ್ಪೃಶ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ನ್ಯಾಯ ನೀಡಬೇಕು. ಈ ಹಿನ್ನಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಈ ವಿಚಾರ ಸಂಕಿರಣದಲ್ಲಿ ಅಸ್ಪಶ್ಯ ಜಾತಿಯ ಮಂತ್ರಿಗಳು, ಶಾಸಕರು, ರಾಜ್ಯಮಟ್ಟದ ನಾಯಕರು, ಹೈಕೋರ್ಟ್ ವಕೀಲರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪತ್ರಕರ್ತ ಎನ್.ರವಿಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಒಳ ಮೀಸಲಾತಿಯನ್ನು ನೀಡಬೇಕು. ಸುಪ್ರೀಂ ಕೋರ್ಟ್ ನಮ್ಮ ಹೋರಾಟಕ್ಕೆ ತಾತ್ವಿಕ ಅಂತ್ಯ ನೀಡಿದೆ ಎಂದರು.
ವಿಚಾರ ಸಂಕಿರಣವನ್ನು ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸುವರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಪ್ರಮುಖರಾದ ಜಿ.ಎಸ್.ಮಂಜುನಾಥ್, ಮುಂಡರಗಿ ನಾಗರಾಜ್, ಎಂ.ಲಕ್ಷ್ಮಿ ನಾರಾಯಣ, ನೆಹರು ಓಲೆಕಾರ್, ಅನಿಲ್ ಕುಮಾರ್, ಬಿ.ಎಸ್. ಪುರುಷೋತ್ತಮ್, ಎಂ.ಗುರುಮೂರ್ತಿ, ಶ್ರೀನಿವಾಸ್ ಕರಿಯಣ್ಣ, ಪ್ರೊ. ಬಿ.ಎಲ್. ರಾಜು ಮುಂತಾದವರು ಭಾಗವಹಿಸುವರು ಎಂದು ತಿಳಿಸಿದರು.ವಿಚಾರಗೋಷ್ಠಿಯಲ್ಲಿ ಮೀಸಲಾತಿ ವರ್ಗೀಕರಣ ಕುರಿತು ಎಚ್.ವಿ. ಮಂಜುನಾಥ್, ವಿ.ಎಲ್. ನರಸಿಂಹಮೂರ್ತಿ, ಮೋಹನ್ ರಾಜ್, ಕೆಪಿ.ಲಕ್ಷ್ಮಣ್ ಮಾತನಾಡುವರು ಎಂದರು.ಈ ಸಂದರ್ಭದಲ್ಲಿ ಎ.ಅಣ್ಣಪ್ಪ, ಕೆ.ಎನ್.ಅಶೋಕ್ ಕುಮಾರ್, ಕೆ. ಚಾವಡೆ ಲೋಕೇಶ್, ಎ.ಡಿ. ಆನಂದಪ್ಪ, ಮೂರ್ತಿ ಉಪಸ್ಥಿತರಿದ್ದರು.