ಸಾರಾಂಶ
ತಮ್ಮ ಕುಟುಂಬವನ್ನು ಬಿಟ್ಟು ದೇಶದ ಗಡಿ ಭಾಗದಲ್ಲಿ ಹಗಲಿರುಳು ದೇಶ ಸೇವೆ ಸಲ್ಲಿಸಿದ್ದಾರೆ. ಅವರನ್ನು ಈ ಸಮಾಜ ಗೌರವದಿಂದ ಕಾಣುವದರೊಂದಿಗೆ ಅವರ ಸೇವೆ ಸ್ಮರಿಸಬೇಕು
ಗದಗ: ದೇಶದ ರಕ್ಷಣೆಯಲ್ಲಿ ಪ್ರತಿಯೊಬ್ಬರ ಸೇವೆ ಅವಶ್ಯವಾಗಿದ್ದು, ದೇಶದ ಗಡಿ ಕಾಯಲು ತಮ್ಮ ಮಕ್ಕಳನ್ನು ಕಳುಹಿಸಬೇಕು ಎಂದು ಅಲ್ಲಮಪ್ರಭುದೇವರ ಮಠದ ಸಿದ್ದಲಿಂಗ ಸ್ವಾಮೀಜಿಗಳು ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ಅನ್ನದಾನೀಶ್ವರ ಮಠದ ಸಭಾಭವನದಲ್ಲಿ ಹಾಲಿ ಮತ್ತು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಮೂವರು ಯೋಧರ ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸಿದ ಹಿನ್ನೆಲೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶ ರಕ್ಷಣೆಯಲ್ಲಿ ಸೈನಿಕರ ಸೇವೆ ಮಹತ್ವದಾಗಿದ್ದು, ನಿವೃತ್ತಿಯಾಗಿ ಗ್ರಾಮಕ್ಕೆ ಬಂದವರು ಕನಿಷ್ಠ ಹತ್ತು ಯುವಕರನ್ನು ದೇಶ ರಕ್ಷಣೆಗೆ ತೆರಳಲು ತರಬೇತಿ ನೀಡಬೇಕು ಅಂದಾಗ ಮಾತ್ರ ತಮ್ಮ ಸೇವಾ ನಿವೃತ್ತಿ ಜೀವನ ಸಾರ್ಥಕವಾಗುತ್ತದೆ ಎಂದರು.ಹಾಲಿ ಮತ್ತು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದತ್ತಾತ್ರೇಯ ಜೋಶಿ ಮಾತನಾಡಿ, ಬಿಸಿಲು, ಚಳಿ, ಮಳೆ ಲೆಕ್ಕಿಸದೇ ತಮ್ಮ ಪ್ರಾಣದ ಹಂಗನ್ನು ತೊರೆದು ದೇಶ ರಕ್ಷಣೆಯಲ್ಲಿ ಸೇವೆ ಸಲ್ಲಿಸಿ ಗ್ರಾಮಕ್ಕೆ ಆಗಮಿಸಿರುವ ಮೂವರು ಯೋಧರ ಕಾರ್ಯ ಶ್ಲಾಘನೀಯ. ತಮ್ಮ ಕುಟುಂಬವನ್ನು ಬಿಟ್ಟು ದೇಶದ ಗಡಿ ಭಾಗದಲ್ಲಿ ಹಗಲಿರುಳು ದೇಶ ಸೇವೆ ಸಲ್ಲಿಸಿದ್ದಾರೆ. ಅವರನ್ನು ಈ ಸಮಾಜ ಗೌರವದಿಂದ ಕಾಣುವದರೊಂದಿಗೆ ಅವರ ಸೇವೆ ಸ್ಮರಿಸಬೇಕು ಎಂದರು.
ನಿವೃತ್ತ ಯೋಧರಾದ ಅಶೋಕ ಮದ್ನೂರ, ಮುತ್ತಪ್ಪ ಕರೆಕಲ್ಲ ಹಾಗೂ ಶಂಭುಲಿಂಗಪ್ಪ ಮುಸ್ಕಿನಭಾವಿ ತಮ್ಮ ಸೈನಿಕ ಸೇವಾ ಅನುಭವ ಹಂಚಿಕೊಂಡರು. ಮೂವರು ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಪೂರ್ವ ಭೀಮಾಂಬಿಕಾ ದೇವಸ್ಥಾನದಿಂದ ಅನ್ನದಾನೀಶ್ವರ ಮಠದವರೆಗೂ ಯೋಧರನ್ನು ಮೆರವಣಿಗೆ ಮಾಡಲಾಯಿತು.ಸಂಘದ ಗೌರವಾಧ್ಯಕ್ಷ ಮಾಜಿ ಸೈನಿಕ ಪಿ.ಎಸ್. ಗುಂಡಳ್ಳಿ, ಉಪಾಧ್ಯಕ್ಷ ಮಹಾಂತೇಶ ಚವಡಿ, ಶರಣಯ್ಯ ಗಂಧದ, ಸಂಜೀವ ಚಿಮನಕಟ್ಟಿ, ಮಂಗಳೇಶ ವಸ್ತ್ರದ, ಚಂದ್ರು ಯಾವಗಲ್, ಅಂದಾನಯ್ಯ ನರಗುಂದಮಠ, ದೇವೇಂದ್ರಪ್ಪ ತಹಶೀಲ್ದಾರ, ಹನುಮಂತಪ್ಪ ಭಜಂತ್ರಿ, ಈಶ್ವರಪ್ಪ ಕುಂಬಾರ, ಈರಣ್ಣ ತಡಹಾಳ ಇದ್ದರು.
ವಿಜಯ ಬಡಿಗೇರ ಸ್ವಾಗತಿಸಿದರು. ಬಸವರಾಜ ಕುಕನೂರು ನಿರೂಪಿಸಿದರು. ಶಿವಪ್ಪ ಬಾಳಿತೋಟ ವಂದಿಸಿದರು.