ಗೈರಾದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ

| Published : Aug 26 2025, 01:05 AM IST

ಸಾರಾಂಶ

ಕೊಪ್ಪಳ ನಗರದಲ್ಲಿ ಬಸ್‌ಗಳು ಬರದೆ ಬೈಪಾಸ್‌ನಲ್ಲಿ ಸಂಚರಿಸುವುದಾದರೇ ನೀವೇಕೆ ಇದ್ದೀರಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಸಾರಿಗೆ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೊಪ್ಪಳ:

ಕಳೆದ ತ್ರೈಮಾಸಿಕ ಸಭೆಗೆ ಗೈರಾಗಿದ್ದ ಅಧಿಕಾರಿಗಳಿಗೆ ವಿರುದ್ಧ ಏನು ಕ್ರಮವಾಗಿದೆ. ನೋಟಿಸ್ ಕೊಟ್ಟರೇ ಸಾಲದು, ಅವರ ವಿರುದ್ಧ ಕ್ರಮಕೈಗೊಳ್ಳುವ ಮೂಲಕ ಬಿಸಿಮುಟ್ಟಿಸಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ ತಾಪಂ ಇಒಗೆ ಸೂಚಿಸಿದರು.

ಸೋಮವಾರ ತಾಲೂಕು ಪಂಚಾಯಿತಿಯಲ್ಲಿ ನಡೆದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅಧಿಕಾರಿಗಳ ಹಾಜರಾತಿ ಚೆಕ್‌ ಮಾಡಿ, ನಾವು ಬಂದು ಸಭೆ ಮಾಡುವುದು, ಅವರು ಗೈರು ಹಾಜರಾಗುವುದು ಎಂದರೇ ಏನರ್ಥ. ಕಳೆದ ಬಾರಿ ಸಭೆಗೆ ಗೈರಾಗಿದ್ದವರ ಮೇಲೆ ಯಾವ ಕ್ರಮವಾಗಿದೆ ಎಂದು ಪ್ರಶ್ನಿಸಿದರು. ಆಗ ತಾಪಂ ಇಒ ದುಂಡಪ್ಪ ತೂರಾದಿ, ನೋಟಿಸ್ ಕೊಟ್ಟಿದ್ದೇವೆ ಎನ್ನುತ್ತಿದ್ದಂತೆ ಶಾಸಕರು ಅದರ ಮೇಲೆ ಏನಾಯಿತು ಎಂದು ಪ್ರಶ್ನಿಸಿದಾಗ ಮೌನವಾದರು.

ಇದರಿಂದ ಆಕ್ರೋಶಗೊಂಡ ಶಾಸಕ, ನೋಟಿಸ್‌ ಕೊಟ್ಟರೆ ಸಾಲದು, ಕ್ರಮವಾಗಬೇಕು. ಗೈರಾದವರ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ ಅಮಾನತು ಮಾಡಿಸಬೇಕು. ಜಿಲ್ಲಾಧಿಕಾರಿ ಹಾಕಿದ ಮಾಹಿತಿ ಪ್ರತಿ ನನಗೂ ಹಾಕಿ, ಅವರೊಂದಿಗೆ ಮಾತನಾಡುತ್ತೇನೆಂದು ಎಂದರು.

ಸಮಾಜ ಕಲ್ಯಾಣ ಇಲಾಖೆ ಅಡಿ ನಡೆಯುತ್ತಿರುವ ಹಾಸ್ಟೆಲ್‌ನಲ್ಲಿ ಯಾವುದೇ ಕೊರತೆ ಆಗಬಾರದು. ವಿದ್ಯಾರ್ಥಿಗಳು ದೂರು ಸಲ್ಲಿಸುವ ಮೊದಲೇ ಎಲ್ಲ ಸೌಲಭ್ಯ ಕಲ್ಪಿಸಬೇಕು. ಹಾಸ್ಟೆಲ್‌ ಕಟ್ಟಡ ಆಗಬೇಕಿದ್ದರೆ ಕೆಕೆಆರ್‌ಡಿಬಿ ಅನುದಾನದಲ್ಲಿ ನಿರ್ಮಿಸೋಣ ಎಂದು ಶಾಸಕರು ಹೇಳಿದಾಗ, ಇಲಾಖೆ ಅಧಿಕಾರಿ, ಇರುವ ಹಾಸ್ಟೆಲ್‌ಗೆ ಸ್ವಂತ ಕಟ್ಟಡವಿದೆ. ಆದರೆ, ಹೆಚ್ಚುವರಿ ವಿದ್ಯಾರ್ಥಿಗಳಿಗೆ ಬಾಡಿಗೆ ಕಟ್ಟಡ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಆಗ ಶಾಸಕರು, ಹೆಚ್ಚುವರಿ ಹಾಸ್ಟೆಲ್‌ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಲು ಒಕ್ಕೂಟದ ಸಂಘಗಳು ಆಗಬೇಕು. ತಾಲೂಕಿನಲ್ಲಿ ಕನಿಷ್ಠ 100 ಸಂಘಗಳನ್ನು ಸ್ಥಾಪಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಇಲಾಖೆ ಅಧಿಕಾರಿ, ಈ ವರ್ಷ ಈ ವರೆಗೆ 12800 ಟನ್ ಯೂರಿಯಾ ರಸಗೊಬ್ಬರ ವಿತರಿಸಲಾಗಿದೆ. ಕಳೆದ ವರ್ಷ 16000 ಟನ್ ವಿತರಿಸಲಾಗಿತ್ತು ಎಂದರು. ಆಗ ಶಾಸಕರು, ಈ ವರ್ಷ ಏಕೆ ಕಡಿಮೆ ಬಂದಿದೆ ಎಂದು ಪ್ರಶ್ನಿಸಿದಾಗ, ಮುಂಗಾರು ಹಂಗಾಮಿನಿ ಪೂರ್ತಿ ಬಂದಿದ್ದು ಇನ್ನೂ ಬರಬೇಕಿದೆ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಆಡಳಿತಾಧಿಕಾರಿ ಪ್ರಕಾಶ, ಗ್ಯಾರಂಟಿ ತಾಲೂಕು ಸಮಿತಿ ಅಧ್ಯಕ್ಷ ಬಾಲಚಂದ್ರ, ತಹಸೀಲ್ದಾರ್‌ ವಿಠ್ಠಲ್‌ ಚಾಗಲೆ ಇದ್ದರು.ಬೈಪಾಸ್‌ನಲ್ಲಿ ಹೋದರೇ ಕೇಳಲ್ಲ....

ಕೊಪ್ಪಳ ನಗರದಲ್ಲಿ ಬಸ್‌ಗಳು ಬರದೆ ಬೈಪಾಸ್‌ನಲ್ಲಿ ಸಂಚರಿಸುವುದಾದರೇ ನೀವೇಕೆ ಇದ್ದೀರಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಸಾರಿಗೆ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಾತ್ರಿ 11ರ ನಂತರ ತೆರಳುವ ಬಸ್‌ಗಳು ಬೈಪಾಸ್‌ನಲ್ಲಿ ಸಂಚರಿಸುವ ಕುರಿತು ಸಾಕಷ್ಟು ಜನರು ದೂರಿದ್ದಾರೆ. ಇನ್ನೂ ಮುಂದೇ ಬೈಪಾಸ್‌ನಲ್ಲಿ ಬಸ್‌ ಸಂಚರಿಸಿದರೆ ನಿಮ್ಮ ಮೇಲೆ ಕ್ರಮವಾಗುತ್ತದೆ ಎಂದು ಎಚ್ಚರಿಸಿದರು.