ಕೆಲಸ ಮಾಡದ ಸಂಸದರನ್ನು ಮನೆಗೆ ಕಳುಹಿಸಿ

| Published : Apr 23 2024, 12:53 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ದೇಶದಲ್ಲಿ ಜನಸಾಮಾನ್ಯರಿಗೆ ನೆರವು ನೀಡುವ ಸರ್ಕಾರ ಬರಬೇಕಾದರೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ. ಈ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತದಾರರು ಅಧಿಕಾರಕ್ಕೆ ತರಬೇಕೆಂದು ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ದೇಶದಲ್ಲಿ ಜನಸಾಮಾನ್ಯರಿಗೆ ನೆರವು ನೀಡುವ ಸರ್ಕಾರ ಬರಬೇಕಾದರೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ. ಈ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತದಾರರು ಅಧಿಕಾರಕ್ಕೆ ತರಬೇಕೆಂದು ಸಕ್ಕರೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ನ ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜು ಆಲಗೂರ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಭೂಮಿಗೆ ಇದ್ದಷ್ಟು ಬುದ್ಧಿ ಮನುಷ್ಯನಿಗೆ ಇಲ್ಲ ಎಂದೆನಿಸುತ್ತಿದೆ. ಭೂಮಿ ಮೂರು ವರ್ಷಕ್ಕೊಮ್ಮೆ ಹೊಸ ಬೆಳೆ ಕೇಳುತ್ತದೆ. ಅದೇ ರೀತಿಯಲ್ಲಿ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಅವರು ಮೂರು ಅವಧಿಯಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಕುಳಿತುಕೊಂಡಿದ್ದಾರೆ. ಇಂತಹ ಸಂಸದರನ್ನು ಮತದಾರರು ಮೇ ೭ರ ಚುನಾವಣೆಯಲ್ಲಿ ಮನೆಗೆ ಕಳುಹಿಸಬೇಕು. ರಮೇಶ ಜಿಗಜಿಣಗಿ ಅವರೇನು ನಮ್ಮ ವೈರಿಯಲ್ಲ. ಅವರು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಮಾಡದ್ದರಿಂದ ಅವರನ್ನು ಬಿಟ್ಟು, ಸರಳ ರಾಜಕಾರಣಿ ರಾಜು ಆಲಗೂರ ಅವರನ್ನು ಬಹುಮತದೊಂದಿಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.ನರೇಂದ್ರ ಮೋದಿ ಅವರಿಗೆ ವಿರೋಧ ಪಕ್ಷ ಅಗತ್ಯವಿಲ್ಲ. ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಅವರು ಸುಳ್ಳು ರಾಜ್ಯದಲ್ಲಿ ನಮ್ಮ ಸರ್ಕಾರ ೫ ಗ್ಯಾರಂಟಿ ಯೋಜನೆಗಳಿಂದ ಜನರು ಪರಿವರ್ತನೆ ಮಾಡಲು ಬಯಸಿದ್ದಾರೆ. ರಾಜ್ಯದ ೨೮ ಸ್ಥಾನಗಳಲ್ಲಿ ೨೦ ಸ್ಥಾನ ಕಾಂಗ್ರೆಸ್‌ಗೆ ಬರಲಿದೆ. ಉತ್ತರ ಕರ್ನಾಟಕದ ೧೨ ಸ್ಥಾನಗಳು ಕಾಂಗ್ರೆಸ್ ಪಡೆದುಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಎಂ.ಬಿ.ಪಾಟೀಲ ಮಾತನಾಡಿ, ದೇಶವನ್ನು ಸ್ವಾವಲಂಬಿಯಾಗಿ ಕಟ್ಟಿದ್ದು ಕಾಂಗ್ರೆಸ್. ಸೂಜಿಯೂ ಉತ್ಪಾದನೆಯಾಗದ ದೇಶದಲ್ಲಿ ದೊಡ್ಡ ದೊಡ್ಡ ಕಾರ್ಖಾನೆ, ಆಸ್ಪತ್ರೆ, ವಿಶ್ವವಿದ್ಯಾಲಯ, ಅಣೆಕಟ್ಟುಗಳನ್ನು ಕಟ್ಟಿದ್ದು ನಮ್ಮ ಪಕ್ಷ. ಮೋದಿಯವರು ಬಂದ ಮೇಲೆ ಎಲ್ಲ ಆಗಿದೆ ಎನ್ನುವುದು ಸುಳ್ಳು ಎಂದರು.

ಏ.26 ರಂದು ವಿಜಯಪುರಕ್ಕೆ ರಾಹುಲ್‌ ಗಾಂಧಿ, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದಾರೆ ಎಂದು ಹೇಳಿದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಈ ಕೆಟ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಬಸವನ ನಾಡಿನಿಂದ ಬದಲಾವಣೆ ಶುರುವಾಗಬೇಕು. ರಾಹುಲ್ ಗಾಂಧಿಯವರ ಕೈ ಬಲಪಡಿಸಬೇಕು. ದೇಶವನ್ನು ಅಧೋಗತಿಗೆ ತಂದಿರುವವರು ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾರನ್ನು ಹೀಗಳೆಯುವುದರಲ್ಲೇ ಕಾಲ ಹಾಕಿದ್ದಾರೆ ಎಂದರು.

ಅಭ್ಯರ್ಥಿ ರಾಜು ಆಲಗೂರ ಅವರು ಮಾತನಾಡಿ, ಇದು ಸತ್ಯ ಮತ್ತು ಅಸತ್ಯದ ನಡುವೆ ನಡೆದಿರುವ ಚುನಾವಣೆ. ಸುಳ್ಳು ಹೇಳಿ ಅಧಿಕಾರದಲ್ಲಿರುವ ಮತ್ತು ಸತ್ಯದ ಪರವಿರುವ ಪಕ್ಷಗಳ ಮಧ್ಯದ ಹೋರಾಟವಿದು. ಸಂವಿಧಾನಗಳ ಹಕ್ಕನ್ನು ಕಸಿಯಲಾಗಿದೆ. ಇಡಿ, ಐಟಿ ಮುಖಾಂತರ ಬೆದರಿಸಲಾಗುತ್ತಿದೆ. ಈ ಸಲ ಮೋದಿ ಗೆದ್ದರೆ ಮುಂದೆ ಚುನಾವಣೆಯೇ ನಡೆಯುವುದಿಲ್ಲ ಎಂದು ಆರೋಪಿಸಿದರು.

ಶಾಸಕರಾದ ಸಿ.ಎಸ್.ನಾಡಗೌಡ, ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ವಿಧಾನ ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ ಮಾತನಾಡಿದರು. ಎಐಸಿಸಿ ವೀಕ್ಷಕ ಸಯ್ಯದ್ ಬುರುನುದ್ದೀನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಮುಖಂಡರಾದ ಚಂದ್ರಶೇಖರಗೌಡ ಪಾಟೀಲ, ಮಲ್ಲಿಕಾರ್ಜುನ ನಾಯಕ, ರುಕ್ಸಾನಾ ಉಸ್ತಾದ, ರುಕ್ಮಿಣಿ ರಾಠೋಡ, ಎ.ಎಂ.ಪಾಟೀಲ, ಶಿವನಗೌಡ ಗುಜಗೊಂಡ, ಶೇಖರ ದಳವಾಯಿ, ಭರತು ಅಗರವಾಲ, ಹಮೀದ ಮುಶ್ರಫ, ಶಂಕರಗೌಡ ಬಿರಾದಾರ, ಸುರೇಶಗೌಡ ಪಾಟೀಲ, ಸಿ.ಪಿ.ಪಾಟೀಲ, ಉಸ್ಮಾನ ಪಟೇಲ ಇತರರು ಇದ್ದರು. ರವಿ ರಾಠೋಡ ಸ್ವಾಗತಿಸಿ, ನಿರೂಪಿಸಿದರು. ರಮಜಾನ್ ಹೆಬ್ಬಾಳ ವಂದಿಸಿದರು.