ಕನ್ನಡಪ್ರಭ ವಾರ್ತೆ ಮಂಡ್ಯ
ವಿಭಿನ್ನ ಸಂಸ್ಕೃತಿಯುಳ್ಳ ದೇಶಕ್ಕೆ ಮಕ್ಕಳನ್ನು ಕಳುಹಿಸಿ ಅಲ್ಲಿನ ಸಂಸ್ಕೃತಿ, ಬದುಕು, ಜೀವನ ಎಲ್ಲವನ್ನೂ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವನ್ನು ಶಾಲೆ ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ಸಿದ್ದಯ್ಯನಕೊಪ್ಪಲು ಗೇಟ್‌ನಲ್ಲಿರುವ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‌ನಿಂದ ಜಪಾನ್‌ನಲ್ಲಿ ನಡೆಯಲಿರುವ ವಿದ್ಯಾರ್ಥಿ ವಿನಿಮಯ ಕಾರ್‍ಯಕ್ರಮಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ಮಕ್ಕಳಿಗೆ ಚಿಕ್ಕಂದಿನಿಂದಲೇ ಶಿಸ್ತು, ಸಂಯಮ, ಸಂಸ್ಕೃತಿ, ಸಂಸ್ಕಾರವನ್ನು ಕಲಿಸುವ ಜೊತೆಗೆ ಆಚಾರ, ವಿಚಾರವನ್ನೂ ಕಲಿಸುವುದು ಅಗತ್ಯ ಎಂದರು.
ಪ್ರಸ್ತುತ ಎಲ್ಲದ್ದಕ್ಕೂ ಬೆಲೆ ಕಟ್ಟುವ ಸಂಸ್ಕೃತಿ ಇದೆ. ಇದನ್ನು ಬಿಟ್ಟು ಮೌಲ್ಯ ಕಟ್ಟುವ ಕೆಲಸ ಮಾಡಬೇಕಿದೆ. ಕನಸುಗಳ ಹಾದಿಯಲ್ಲಿ ಆಸೆಗಳಿಗೆ ಜಾಗ ಇರಬಾರದು. ತಂದೆ- ತಾಯಿಗಳು ಮಕ್ಕಳಿಗೆ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.ಭಾರತದಲ್ಲಿ ವ್ಯಕ್ತಿಯ ವಯಸ್ಸು 75 ರಿಂದ 80 ವರ್ಷವಾದರೆ, ಅತ್ಯಂತ ಮುಂದುವರಿದ ರಾಷ್ಟ್ರ ಹಾಗೂ ಅತಿ ಹೆಚ್ಚು ವಯಸ್ಸಾದವರೇ ಇರುವ ರಾಷ್ಟ್ರ ಎಂದು ಹೆಸರಾಗಿರುವ ಜಪಾನ್‌ನಲ್ಲಿ ವ್ಯಕ್ತಿ ವಯಸ್ಸು ಸುಮಾರು 125 ರಿಂದ 130 ವರ್ಷ ಕಾಲ ಬದುಕುತ್ತಾರೆ. ಇದಕ್ಕೆ ಶಿಸ್ತು, ಸಂಸ್ಕೃತಿಯ ಜೊತೆಗೆ ಅವರು ಜೀವನದಲ್ಲಿ ಅಳವಡಿಸಿಕೊಂಡಿರುವ ಮೌಲ್ಯಗಳೇ ಕಾರಣ ಎಂದು ಪ್ರತಿಪಾದಿಸಿದರು.
ಮಕ್ಕಳು ಅಂಕಗಳ ಜೊತೆಗೆ ಬದುಕಿನ ಅಂಕಗಳನ್ನೂ ಪಡೆಯುವುದು ಅಷ್ಟೇ ಮುಖ್ಯ. ವರ್ಷಪೂರ್ತಿ ಅಧ್ಯಯನ ನಡೆಸಿ ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಪರೀಕ್ಷೆ ಎದುರಿಸಿ ಅಂಕಗಳ ಹಿಂದೆ ಓಡುವುದು ನಿಜವಾದ ಬದುಕಲ್ಲ. ಅದು ಕೇವಲ ದಾಖಲೆಗಳಲ್ಲಿರುವುದು ಮಾತ್ರ. ಆದರೆ ಅನುಭವದಿಂದ ಅನುಭವಿಸಿ ಕಲಿಯುವುದೇ ನಿಜವಾದ ಜೀವನ ಎಂದು ಉದಾಹರಣೆ ಸಮೇತ ವಿವರಿಸಿದರು.
ಅವರಿಗೆ ಪುಸ್ತಕ ಓದುವುದನ್ನೂ ಪ್ರೇರೇಪಿಸಬೇಕು. ಕೇವಲ ಶಾಲೆಗಳಲ್ಲಿ ಮಾತ್ರ ಪಾಠ ಹೇಳಿಕೊಡುವುದಕ್ಕಷ್ಟೇ ಮೀಸಲಾಗದೆ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ಮನೆಯಲ್ಲಿ ಬದುಕಿನ ಶಿಕ್ಷಣ ಆಗಬೇಕು ಎಂದರು.
ಸಮಯ ಎನ್ನುವುದು ದೊಡ್ಡ ಶಕ್ತಿ. ಸಮಯವನ್ನು ವ್ಯರ್ಥ ಮಾಡಬಾರದು. ದೇವರು ಕೊಟ್ಟ ವರ ಎಂದರೆ ಅದು ಸಮಯ ಮಾತ್ರ. ಇದನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.ಶಾಲೆ ಅಧ್ಯಕ್ಷ ಮಂಜು ಮಾತನಾಡಿ, ಕಳೆದ ಮೂರು ವರ್ಷಗಳಿಂದಲೂ ನಮ್ಮ ಶಾಲೆಯಿಂದ ವಿದ್ಯಾರ್ಥಿಗಳನ್ನು ಜಪಾನ್‌ಗೆ ಕಳುಹಿಸಿ ಅಲ್ಲಿನ ಸಂಸ್ಕೃತಿಯನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ನಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತಿದೆ ಎಂದರು.
ಈ ಬಾರಿ 6ನೇ ತರಗತಿಯ ವಿಸ್ಮಯ, ನಿಶ್ಚಯ್ ಆರ್., ಸಾನ್ವಿ ಶ್ರೀಧರ್, 8ನೇ ತರಗತಿಯ ಸಿರಿ ಲಕ್ಷ್ಮೀ, 10ನೇ ತರಗತಿಯ ಹಿತೇಶ್‌ಸಿಂಗ್, ಪರಿಣಿತ್ ಜೆ.ಗೌಡ, ಮನ್ವಿತ್‌ರಾಜ್ ದತ್ತಾತ್ರೇಯ, ದುಶ್ಯಂತ್ ಎಂ ಅವರೊಂದಿಗೆ ಮೈಸೂರಿನ ಡಿಪೌಲ್ ವಸತಿ ಶಾಲೆಯ 10 ಮಂದಿ ಸೇರಿ ಒಟ್ಟು 18 ಮಂದಿ ವಿದ್ಯಾರ್ಥಿಗಳು ರಾಜ್ಯದಿಂದ ಜಪಾನ್‌ನಲ್ಲಿ ನಡೆಯುವ ಕಾರ್‍ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದರೊಂದಿಗೆ ಹಿರೋಶಿಮಾ ನಗರಕ್ಕೂ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ವೀಕ್ಷಿಸಲಿದ್ದಾರೆ ಎಂದು ವಿವರಿಸಿದರು.ಈ ವೇಳೆ ಶಾಲೆ ಪ್ರಾಂಶುಪಾಲರಾದ ಸುನೀತಾ ಹಾಗೂ ಪೋಷಕರು ಇದ್ದರು.
------ 27ಕೆಎಂಎನ್ ಡಿ14ಮಂಡ್ಯ ಸಿದ್ದಯ್ಯನಕೊಪ್ಪಲು ಗೇಟ್‌ನ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‌ನಿಂದ ಜಪಾನ್‌ನಲ್ಲಿ ನಡೆಯಲಿರುವ ವಿದ್ಯಾರ್ಥಿ ವಿನಿಮಯ ಕಾರ್‍ಯಕ್ರಮಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳನ್ನು ಡೀಸಿ ಡಾ.ಕುಮಾರ ಅಭಿನಂದಿಸಿದರು.