ಹಿರಿಯಚೇತನರ ಸೇವೆ ಸಮುದಾಯಕ್ಕೆ ಅತ್ಯವಶ್ಯಕ

| Published : Jul 19 2025, 01:00 AM IST

ಸಾರಾಂಶ

ಖಾಸಗಿಕ್ಷೇತ್ರ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು ಹಿರಿಯಚೇತನರಿಗೆ ಗೌರವ ನೀಡುವ ಪರಂಪರೆ ಉಳಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಜಮಖಂಡಿ

ಇಂದಿನ ಯುಗದಲ್ಲಿ ಹಿರಿಯಚೇತನರ ಸೇವೆಗಳು ಸಮಾಜ ಮತ್ತು ಸಮುದಾಯಕ್ಕೆ ಅವಶ್ಯಕವಾಗಿದೆ. ಯುವ ಜನಾಂಗವನ್ನು ಸರಿದಾರಿಯಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾಧ್ಯಕ್ಷ ಎಸ್.ಪಿ.ಬಿರಾದಾರ ಹೇಳಿದರು.

ನಗರದ ಬಸವ ಭವನದಲ್ಲಿ ಶುಕ್ರವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಆಶ್ರಯದಲ್ಲಿ ಜಮಖಂಡಿ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ 38ನೇ ವಾರ್ಷಿಕ ಸಭೆ ಮತ್ತು 70 ವರ್ಷದ ಹಿರಿಯ ಚೇತನರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಯುವಜನಾಂಗದಲ್ಲಿ ಗೌರವಿಸುವ ಸಂಸ್ಕೃತಿ ರೂಢಿಸಬೇಕಾಗಿದೆ. ಕುಟುಂಬದ ಮೊಮ್ಮಕ್ಕಳು ಹೆಚ್ಚಾಗಿ ಅಜ್ಜ-ಅಜ್ಜಿಯನ್ನು ಅನುಕರಣೆ ಮಾಡುವ ಸ್ವಭಾವ ಹೊಂದಿರುವ ಹಿನ್ನೆಲೆಯಲ್ಲಿ ಮೊಮ್ಮಕ್ಕಳಿಗೆ ಗೌರವಿಸುವ ಸಂಸ್ಕೃತಿ, ಪರಂಪರೆ ಬಳುವಳಿಯಾಗಿ ನೀಡಬೇಕಾಗಿದೆ. ಯುವಕರನ್ನು ದುಶ್ಚಟಗಳಿಂದ ದೂರ ಇಡುವ ಮೂಲಕ ಸಮಾಜ ರಕ್ಷಣೆ ಮಾಡಬೇಕಾಗಿದೆ. ಖಾಸಗಿಕ್ಷೇತ್ರ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು ಹಿರಿಯಚೇತನರಿಗೆ ಗೌರವ ನೀಡುವ ಪರಂಪರೆ ಉಳಿಸಿಕೊಳ್ಳಬೇಕು ಎಂದರು.

ನಿರಾಣಿ ಸಮೂಹ ಸಂಸ್ಥೆಗಳ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ಹಿರಿಯ ನಾಗರಿಕರು ತಮ್ಮ ಆರೋಗ್ಯ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ನಿವೃತ್ತ ನೌಕರರು ಸಮಾಜದ ಮುಖವಾಣಿಯಾಗಿ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು. ನಿವೃತ್ತ ನೌಕರರ ಸಂಘದ ಜತೆಗೆ ನಿರಂತರವಾಗಿ ನಾವು ಗುರುತಿಸಿಕೊಂಡಿದ್ದೇವೆ ಎಂದು ಹೇಳಿದರು.

ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿ.ಬಿ.ಗೋವಿಂದಪ್ಪನವರ ಮಾತನಾಡಿ, ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಗೊಂಡಿದೆ. ದೇಶದಲ್ಲಿ ಸರ್ಕಾರಿ ನಿವೃತ್ತ ನೌಕರರ ಬೃಹತ್ ಪ್ರತಿಭಟನೆ ನಡೆಯಲಿದೆ. ಜು.21ರಂದು ಜಮಖಂಡಿ ನಗರದಲ್ಲಿ ಪ್ರತಿಭಟನೆಯೊಂದಿಗೆ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಗುವುದು. ಶೀಘ್ರದಲ್ಲಿ ಮುಧೋಳದಲ್ಲಿ ಜಿಲ್ಲಾಮಟ್ಟದ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಎಂ.ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ ಮಾತನಾಡಿದರು. ಸರ್ಕಾರದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಿ.ಪಿ.ಮೇಗಾಡಿ, ಧರೆಪ್ಪ ಮಾಳಿ, ಅಶೋಕ ಅರ್ಜುನಗಿ, ನೀಲಾಂಬಿಕಾ ಅವಟಗೇರ, ರತ್ನವ್ವ ಚಲವಾದಿ, ದುಂಡಪ್ಪ ಹೆಗ್ಗೊಂಡ, ಶಾರದಾ ಹಂಚಿನಾಳ ಸಹಿತ 25 ಜನರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಪಿ.ಎನ್.ಪಾಟೀಲ, ನಿವೃತ್ತ ಡಿವೈಎಸ್‌ಪಿ ಸಿ.ಪಿ.ಜನವಾಡ, ಬಾಲ ವಿಕಾಸ ಅಕಾಡೆಮಿ ಎಚ್.ವೈ.ಜೀರಾಳೆ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಬಿ.ಅಜ್ಜನವರ ಸಹಿತ ಹಲವರು ಇದ್ದರು. ಕಲಾವಿದ ಬಿ.ಎನ್.ಅಸ್ಕಿ ಪ್ರಾರ್ಥಿಸಿದರು. ಸಂಘದ ಗೌರವಾಧ್ಯಕ್ಷ ಉಮೇಶ ಗಸ್ತಿ ಸ್ವಾಗತಿಸಿದರು. ನಿವೃತ್ತ ಅಧ್ಯಾಪಕ ಎಸ್.ಆರ್.ಪಾಟೀಲ, ನಿವೃತ್ತ ಶಿಕ್ಷಕರಾದ ಸಂಗಮೇಶ ಗಾಣಿಗೇರ, ಎಂ.ಡಿ.ಸಂಖ ನಿರೂಪಿಸಿದರು. ನಿವೃತ್ತ ಶಿಕ್ಷಕ ಪಾಂಡು ತುಳಸಿಗೇರಿ ವಂದಿಸಿದರು.