ಅಧ್ಯಾತ್ಮದ ದೃಷ್ಟಿಯಿಂದ ದೇಹಕ್ಕೆ ವಯಸ್ಸಾಗುತ್ತದೆಯೇ ಹೊರತು ಆತ್ಮಕ್ಕೆ ಎಂದಿಗೂ ವಯಸ್ಸಾಗುವುದಿಲ್ಲ. ಹಿರಿಯರ ಅನುಭವದ ಮಾತುಗಳನ್ನು ಆಲಿಸುವುದು,

ಕೊಪ್ಪಳ: ಹಿರಿಯರು ಕೇವಲ ವಯಸ್ಸಿನಲ್ಲಿ ದೊಡ್ಡವರಲ್ಲ, ಅವರು ಅನುಭವ, ತಾಳ್ಮೆ, ಸಹನೆ ಹಾಗೂ ಜೀವನ ಜ್ಞಾನದ ಭಂಡಾರವಾಗಿದ್ದು, ಅವರ ಅನುಭವಗಳು ನಮ್ಮ ಬದುಕಿಗೆ ದಾರಿದೀಪವಾಗುತ್ತವೆ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ಹೇಳಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಹಿರಿಯರ ಪ್ರೀತಿ, ಶುಭ ಹಾರೈಕೆ ಹಾಗೂ ಆಶೀರ್ವಾದ ಯುವಪೀಳಿಗೆಗೆ ಅಗತ್ಯ. ಇದು ಕುಟುಂಬಕ್ಕೆ ಧೈರ್ಯ ನೀಡುತ್ತದೆ. ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಉತ್ತಮ ಮೌಲ್ಯ, ಸಂಸ್ಕಾರ ಮತ್ತು ಮಾನವೀಯತೆಯನ್ನು ಕಲಿಸುವಲ್ಲಿ ಹಿರಿಯರ ಪಾತ್ರ ಮಹತ್ವದ್ದಾಗಿದೆ ಎಂದರು.

ಅಧ್ಯಾತ್ಮದ ದೃಷ್ಟಿಯಿಂದ ದೇಹಕ್ಕೆ ವಯಸ್ಸಾಗುತ್ತದೆಯೇ ಹೊರತು ಆತ್ಮಕ್ಕೆ ಎಂದಿಗೂ ವಯಸ್ಸಾಗುವುದಿಲ್ಲ. ಹಿರಿಯರ ಅನುಭವದ ಮಾತುಗಳನ್ನು ಆಲಿಸುವುದು, ಅವರ ಭಾವನೆಗಳನ್ನು ಗೌರವಿಸುವುದು ಹಾಗೂ ಅವರಿಗೆ ಪ್ರೀತಿ ಮತ್ತು ಸಮಯ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆಧ್ಯಾತ್ಮದ ಮೂಲಕ ಹಿರಿಯರು ಸತ್ಯ, ಶಾಂತಿ ಹಾಗೂ ನೆಮ್ಮದಿ ಕಂಡುಕೊಳ್ಳಬಹುದು. ಕುಟುಂಬದೊಂದಿಗೆ ಸಕಾರಾತ್ಮಕ ಚಿಂತನೆ ಮತ್ತು ಭಾವನೆಗಳನ್ನು ಬೆಳೆಸಿಕೊಳ್ಳಲು ಆಧ್ಯಾತ್ಮ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಹಿರಿಯ ನಾಗರಿಕರಿಂದಲೇ ಕಾರ್ಯಕ್ರಮ ಉದ್ಘಾಟಿಸಲಾಯಿತು. ನಿವೃತ್ತ ಸಹಾಯಕ ಉಪನಿರ್ದೇಶಕ ಬಿರುಂದರ ಕೇಸರಿಮಠ ಮಾತನಾಡಿ, ಹಿರಿಯ ನಾಗರಿಕರು ಆಧ್ಯಾತ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಾರ್ಥಕ ಬದುಕಿನ ಅನುಭವ ಪಡೆಯಲು ಸಾಧ್ಯ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಹಾಲಯ್ಯ ಹುಡೇಜಾಲಿ ಮಾತನಾಡಿ, ಹಿರಿಯರಿಗೆ ಮಾನಸಿಕ ಶಾಂತಿ ಮತ್ತು ನೆಮ್ಮದಿ ದೊರೆಯಲು ಅಧ್ಯಾತ್ಮದ ಮಾರ್ಗ ಹಾಗೂ ಧ್ಯಾನ ಅಗತ್ಯ ಎಂದರು.

ವಿಶ್ವಕರ್ಮ ಸಮಾಜದ ಅಧ್ಯಕ್ಷ ರುದ್ರಪ್ಪ, ಆಹಾರ ಮತ್ತು ಸರಬರಾಜು ಇಲಾಖೆಯ ನಿವೃತ್ತ ಅಧಿಕಾರಿ ಹನುಮಂತಪ್ಪ, ಗವಿಸಿದ್ದಪ್ಪ ಮೆಡಿಕಿನಾಳ, ಮುಖಂಡ ಗಂಗಾಧರ ಕಬ್ಬೇರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಬಿ.ಕೆ. ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು.