ಗಂಗಾವತಿ ನಗರದ ಮಂಥನ ಸಭಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ವೇದಮೂರ್ತಿ ಬಿ.ಎಸ್. ಉದ್ಘಾಟಿಸಿದರು.
ಗಂಗಾವತಿ: ಹಿರಿಯ ನಾಗರಿಕರು ಸಮಾಜದ ಅಮೂಲ್ಯ ಆಸ್ತಿ. ಅವರ ಅನುಭವ, ಜ್ಞಾನ ಮತ್ತು ಮಾರ್ಗದರ್ಶನವನ್ನು ಯುವ ಪೀಳಿಗೆ ಗೌರವಿಸಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ವೇದಮೂರ್ತಿ ಬಿ.ಎಸ್. ಹೇಳಿದರು.
ನಗರದ ಮಂಥನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಗಂಗಾವತಿ, ವಕೀಲರ ಸಂಘ, ತಾಲೂಕು ಆಡಳಿತ, ತಾಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರುಣಾ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನೆಯಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿಯರನ್ನು ಮಾನವೀಯತೆ ಹಾಗೂ ಗೌರವದಿಂದ ನೋಡಿಕೊಳ್ಳುವ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿಯೂ ಹಿರಿಯ ನಾಗರಿಕರಿಗೆ ಆದ್ಯತೆ ಹಾಗೂ ಗೌರವ ನೀಡಬೇಕು ಎಂದರು.ಹಿರಿಯ ನಾಗರಿಕರು ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿದಾಗ ಅವರ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಅವರಿಗೆ ಅಗತ್ಯವಾದ ಗೌರವ ಹಾಗೂ ಸಹಕಾರ ನೀಡಬೇಕು. ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಸರ್ಕಾರಿ ಕಚೇರಿಗಳಲ್ಲಿ ಪ್ರತ್ಯೇಕ ಕೌಂಟರ್‌ಗಳ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಅತಿಥಿ ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ್ ಪಾಟೀಲ್ ಮಾತನಾಡಿ, ಹಿರಿಯ ನಾಗರಿಕರನ್ನು ಎಲ್ಲರೂ ಗೌರವಿಸಬೇಕು ಎಂದರು.ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಂ. ಮಂಜುನಾಥ ಸ್ವಾಮಿ ಮಾತನಾಡಿ, ತಂದೆ, ತಾಯಿಯನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಪೋಷಿಸದೇ ಇದ್ದರೆ, ಮಕ್ಕಳಿಗೆ ನೀಡಿರುವ ಸೌಲಭ್ಯಗಳನ್ನು ವಾಪಸ್ ಪಡೆಯುವ ಹಕ್ಕು ಪಾಲಕರಿಗೆ ಇದೆ ಎಂದು ಮಾಹಿತಿ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್, ಗಂಗಾವತಿ ವಕೀಲರ ಸಂಘದ ಅಧ್ಯಕ್ಷ ಶರಣಬಸಪ್ಪ ನಾಯಕ, ಉಪಾಧ್ಯಕ್ಷ ಪ್ರಕಾಶ್ ಎಂ. ಕುಸಬಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಗದ್ದಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಸನ್ನ ಕುಮಾರ್, ತಹಸೀಲ್ದಾರ್ ವೆಂಕಟೇಶ ಆಶ್ರಿತ, ಕರುಣಾ ರೂರಲ್ ಸಂಸ್ಥೆಯ ಅಧ್ಯಕ್ಷರಾದ ಡಾ. ಸಿ. ಮಹಾಲಕ್ಷ್ಮಿ, ಕಾರ್ಯದರ್ಶಿ ಅಶೋಕ ಪಾಟೀಲ್, ನಿವೃತ್ತ ನೌಕರರ ಸಂಘದ ಅದ್ಯಕ್ಷ ಸಿ. ಚಕ್ರಪಾಣಿರಾವ್, ಅಂಗವಿಕಲರ ಸಂಘದ ಮಂಜುನಾಥ ಹೊಸಕೇರಿ, ಮಂಜುಳಾ, ಉಪಸ್ಥಿತರಿದ್ದರು.