ಹಿರಿಯ ನಾಗರಿಕರೆಂದರೆ ಯುವಕರಿಗೆ ತಾತ್ಸಾರ: ಜಪಾನಂದ ಜೀ

| Published : Feb 20 2025, 12:50 AM IST

ಸಾರಾಂಶ

ನಾವು ವಿದ್ಯಾರ್ಥಿಗಳಿದ್ದ ಸಂದರ್ಭದಲ್ಲಿ ಕಲಿತ ಪಾಠಗಳಿಂದ ಇಂದು ಸಮಾಜದಲ್ಲಿ ಅಶಕ್ತರು, ವಯೋವೃದ್ದರು, ಅಂಗವಿಕಲರ ಸೇವೆ ಮಾಡುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ತುಮಕೂರು

ಹಿರಿಯ ನಾಗರಿಕರೆಂದರೆ ಇಂದಿನ ವಿದ್ಯಾವಂತ ಯುವಜನತೆಗೆ ತಾತ್ಸಾರ ಮನೋಭಾವನೆ ಇದೆ. ಮಾತೃ ದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎಂಬುದು ಕೇವಲ ಘೋಷವಾಕ್ಯವಾಗಿ ಮಾತ್ರ ಉಳಿದಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಹೆಚ್ಚು ಹೆಚ್ಚು ಮಾನವೀಯ ಮೌಲ್ಯಗಳನ್ನು ಬೋಧಿಸಬೇಕಾದ ಅಗತ್ಯವಿದೆ ಎಂದು ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷಸ್ವಾಮಿ ಜಪಾನಂದ ಜೀ ತಿಳಿಸಿದ್ದಾರೆ.ತುಮಕೂರು ವಿವಿಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತುಮಕೂರು, ಮೊಬಿಲಿಟಿ ಇಂಡಿಯಾ ಇವರ ಸಂಯುಕ್ತ ಆಶ್ರಯದಲ್ಲಿ ತುಮಕೂರು ಜಿಲ್ಲೆಯ ಗ್ರಾಮೀಣ ಹಾಗೂ ನಗರ ಅಂಗವಿಕಲರ ಪುನರವಸತಿ ಕಾರ್ಯಕರ್ತರು ಹಾಗೂ ವಿವಿದೊದ್ದೇಶ ಕಾರ್ಯಕರ್ತರಿಗೆ “ಹಿರಿಯ ನಾಗರಿಕರಿಗೆ ನೆರವು ಹಾಗೂ ಸಾಮಾಜಿಕ ಆರೈಕೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಾವು ವಿದ್ಯಾರ್ಥಿಗಳಿದ್ದ ಸಂದರ್ಭದಲ್ಲಿ ಕಲಿತ ಪಾಠಗಳಿಂದ ಇಂದು ಸಮಾಜದಲ್ಲಿ ಅಶಕ್ತರು, ವಯೋವೃದ್ದರು, ಅಂಗವಿಕಲರ ಸೇವೆ ಮಾಡುತ್ತಿದ್ದೇವೆ. ಹಾಗೆಯೇ ಇಂದು ಸಹ ಮಕ್ಕಳಿಗೆ ಹೆಚ್ಚು ಮೌಲ್ಯಯುತ ಶಿಕ್ಷಣ ನೀಡಿದರೆ ಅವರಿಂದಲೂ ಒಳ್ಳೆಯದನ್ನು ನಿರೀಕ್ಷಿಸುಬಹುದು.ಆಶಕ್ತ ಕಂಬನಿ ಒರೆಸದೆ ಮೇರಾ ಭಾರತ್ ಮಹಾನ್ ಆಗಲು ಸಾಧ್ಯವಿಲ್ಲ ಎಂದರು.ವಿದೇಶಗಳಲ್ಲಿ ಹಿರಿಯ ನಾಗರಿಕರು,ವಿಕಲಚೇತನ ಬೇಕು,ಬೇಡಗಳನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ಭಾರತದಲ್ಲಿಯೂ ಅಂತಹ ಅನೇಕ ಯೋಜನೆಗಳಿದ್ದರೂ ಅನುಷ್ಠಾನ ಸಂದರ್ಭದಲ್ಲಿ ಕೊಂಚ ಏರುಪೇರಾಗುತ್ತಿದೆ. ಇದರ ಪರಿಣಾಮ ವಿಕಲಚೇತರು, ಅಶಕ್ತರು,ಹಿರಿಯ ನಾಗರಿಕರು ಸೌಲಭ್ಯಗಳಿಂದ ವಂಚಿತರಾಗಿ, ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದರು.ಮೊಬಿಲಿಟಿ ಇಂದಿಯಾದ ಕಾರ್ಯಕಾರಿ ನಿರ್ದೇಶಕ ಅಲ್ಬಿನಾ ಶಂಕರ್ ಮಾತನಾಡಿ, ಹತ್ತಾರು ವರ್ಷಗಳಿಂದ ನಮ್ಮ ಸಂಸ್ಥೆ ಅಂಗವಿಕಲರ ಸೇವೆಯಲ್ಲಿ ತೊಡಗಿದೆ.ಇದರ ಜೊತೆಗೆ ಹಿರಿಯ ನಾಗರಿಕರಿಗೂ ತನ್ನ ಸೇವೆಯನ್ನು ವಿಸ್ತರಿಸಿದೆ. ಕಳೆದ ನವೆಂಬರ್‌ನಲ್ಲಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಅಸ್ಪತ್ರೆಗಳಲ್ಲಿಯಾಗಲಿ, ಸರ್ಕಾರಿ ಕಚೇರಿಗಳಲ್ಲಾಗಲಿ, ಸಾರ್ವಜನಿಕ ಸ್ಥಳಗಳಲ್ಲಿ ಮೊದಲ ಅದ್ಯತೆ ಸಿಗುತ್ತಿಲ್ಲ. ಅವರು ಘನತೆಯಿಂದ ಬದುಕಲು ಬೇಕಾದ ವಾತಾವರಣವನ್ನು ನಮ್ಮ ಸಮಾಜ ಕಲ್ಪಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮೊಬಿಲಿಟಿ ಇಂಡಿಯಾ ವಿಕಲಚೇತನದ ಜೊತೆಗೆ, ಹಿರಿಯ ನಾಗರಿಕರಿಗೆ ಅವರಿಗೆ ಬೇಕಾದ ನೆರವು ಮತ್ತು ಸಾಮಾಜಿಕ ಆರೈಕೆಯಲ್ಲಿ ತೊಡಗಿದೆ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಟರಾಜ್ ಮಾತನಾಡಿ, ದೇಶದಲ್ಲಿ ಶಿಕ್ಷಣ ಪಡೆದಂತಹವರೇ ಆಸ್ತಿ ಹಂಚಿಕೊಳ್ಳುವಂತೆ, ತಂದೆ ತಾಯಿಗಳನ್ನು ಹಂಚಿಕೊಂಡು, ಕೊನೆಗಾಲದಲ್ಲಿ ಜೊತೆಯಾಗಿರಬೇಕಾದ ಜೀವಗಳನ್ನು ಬೇರೆ ಮಾಡುತ್ತಿರುವುದು ವಿಪಯಾಸ ಎಂದರು.

ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ,ವಿಶ್ವವಿದ್ಯಾಲಯಕ್ಕೆ ಇಂದು ಹಿರಿಯ ನಾಗರಿಕರು, ಅಂಗವಿಕಲರ ಆಶೀರ್ವಾದ ಸಿಕ್ಕಿದೆ.ತುಮಕೂರು ವಿವಿಯಲ್ಲಿ ಶ್ರೀಜಪಾನಂದಜೀ ಅವರ ನೇತೃತ್ವದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು, ಮಧ್ಯಾಹ್ನದ ವೇಳೆ ಸುಮಾರು 1500 ಜನ ಮಕ್ಕಳಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮೊಬಿಲಿಟಿ ಇಂಡಿಯಾ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಆನಂದ್.ಎಸ್.ಎನ್ ಮಾತನಾಡಿದರು. ವೇದಿಕೆಯಲ್ಲಿ ತುಮಕೂರು ವಿವಿ ಕುಲಸಚಿವೆ ಶ್ರೀಮತಿ ನಾಹೀದಾ ಜಮ್ಹ ಜಮ್ಹ್, ಸ್ನಾತಕೋತ್ತರ ಸಮಾಜ ಕಾರ್ಯ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ.ರಮೇಶ್ ಬಿ., ಹಿರಿಯ ಪ್ರಾಧ್ಯಾಪಕ ಡಾ.ಪರುಶುರಾಮ್, ವರದಕ್ಷಿಣೆ ವಿರೋಧಿ ವೇದಿಕೆಯ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್, ಗ್ರಾಮೀಣ ಮತ್ತು ನಗರ ಪುನರವಸತಿ ಕಾರ್ಯಕರ್ತರು ಸಂಘದ ಅಧ್ಯಕ್ಷ ಚಿತ್ತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.