ಹಿರಿಯ ನಾಗರಿಕರು ನಮ್ಮ ಸಮಾಜದ ದಾರಿದೀಪ ಮತ್ತು ದೇಶದ ನಿಜವಾದ ಸಂಪತ್ತು. ಅವರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಹಿರಿಯ ನಾಗರಿಕರು ನಮ್ಮ ಸಮಾಜದ ದಾರಿದೀಪ ಮತ್ತು ದೇಶದ ನಿಜವಾದ ಸಂಪತ್ತು. ಅವರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಹೇಳಿದರು.

ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ನಿವೃತ್ತಿ ನೌಕರರ ಸಂಘ ಹಾಗೂ ಹಿರಿಯ ನಾಗರೀಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2026ರ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಹಿರಿಯ ನಾಗರಿಕರು 60 ವರ್ಷ ಆದ ನಂತರದಲ್ಲಿ ಅವರ ಆರೋಗ್ಯದ ದೃಷ್ಟಿಯಿಂದ ಹಾಗೂ ಸಮಾಜದಲ್ಲಿ ಅವರಿಗೆ ಯಾವ ರೀತಿ ಗೌರವ ಸಿಗುತ್ತಿದೆ ಎಂಬುದನ್ನು ಅರಿಯಲು ಈ ದಿನಾಚರಣೆ ಹಮ್ಮಿಕೊಳ್ಳಲಾಗುತ್ತದೆ. ಅವರಿಗೆ ಯಾವುದಾದರೂ ಶೋಷಣೆ ಒಳಗಾದರೆ ಯಾವುದೆಲ್ಲ ಕಾನೂನುಗಳು ಇವೆ ಎಂಬುದನ್ನು ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ ಎಂದರು.

ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಶಂಕರಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ಜಿ.ಸುರೇಶ ಮಾತನಾಡಿದರು. ನಂತರ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಹಿರಿಯ ನಾಗರಿಕರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸರಸ್ವತಿ, ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಅಭಿಯಂತರ ಜೈಪಾಲ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೆಂಕಟೇಶ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಸಮಾಜ ಸೇವಕ ಸೋಮನಾಥ ಭಂಡಾರಿ ಸಹಿತ ಹಿರಿಯ ನಾಗರಿಕರು, ವಿವಿಧ ಸಂಘ-ಸಂಸ್ಥೆಯ ಮುಖಂಡರು, ಮಹಿಳೆಯರು ಇದ್ದರು.

ಗಾಳದಾಳ: ಪಿಎಚ್‌ಸಿಯಲ್ಲಿ ವೃದ್ಧರ ದಿನಾಚರಣೆ

ರಾಯಚೂರು: ತಾಲೂಕಿನ ಗಾಣದಾಳ ಆರೋಗ್ಯ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ವೃದ್ಧರ ದಿನವನ್ನು ಗುರುವಾರ ಆಚರಿಸಲಾಯಿತು. ಜಿಲ್ಲಾಡಳಿತ, ಜಿಪಂ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಗಾಣದಾಳ ಪಿಎಚ್‌ಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಪಿಎಚ್ಸಿ ವೈದ್ಯಾಧಿಕಾರಿ ಡಾ.ಅಜಯ ಕುಮಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸಮಾಜಕ್ಕೆ ಹಾಗೂ ಕುಟುಂಬಗಳಿಗೆ ಹಿರಿಯ ನಾಗರಿಕರು ಕೊಟ್ಟಿರುವ ಕೊಡುಗೆಗಳನ್ನು ಸ್ಮರಿಸುವುದರ ಜತೆಗೆ ಅವರನ್ನು ಗೌರವಿಸಲು ಹಿರಿಯ ನಾಗರಿಕರ ದಿನ ಆಚರಿಸುತ್ತಾ ಬರಲಾಗುತ್ತಿದೆ ಎಂದರು.

ಮಟಮಾರಿ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದ್ ಕುಮಾರ ಮಾತನಾಡಿ, ಸರ್ಕಾರದಿಂದ ಹಿರಿಯರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು,

ಫಾರ್ಮಸಿ ಅಧಿಕಾರಿ ನಿಶಾಂತ್ ಅಂಜುಮ್, ಸ್ಟಾಫ್ ನರ್ಸ್ ಸುಲ್ತಾನ್ ಬಿ, ಪ್ರಯೋಗ ಶಾಲಾ ತಂತ್ರಜ್ಞೆ ಗೌರಿ, ಗ್ರೂಪ್ ಡಿ ಗುಂಡೂರಾವ್, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಉಷಾರಾಣಿ ಉಪಸ್ಥಿತರಿದ್ದರು. ಆಶಾ ದಮಯಂತಿ ವಂದಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಬೂದೇಮ್ಮ ಕಾರ್ಯಕ್ರಮ ನಿರೂಪಿಸಿದರು.