ಹಿರಿಯ ನಾಗರಿಕರು ತಮ್ಮ ಹಕ್ಕುಗಳ ಸದುಪಯೋಗ ಪಡೆದುಕೊಳ್ಳಿ : ನ್ಯಾ. ಯೋಗೀಶ್ ಪಿ.ಆರ್

| Published : Jun 25 2025, 01:17 AM IST / Updated: Jun 25 2025, 01:18 AM IST

ಸಾರಾಂಶ

ಹಿರಿಯ ನಾಗರಿಕರು ತಮ್ಮ ಹಕ್ಕುಗಳನ್ನು ಕಾನೂನು ಬದ್ಧವಾಗಿ ಚಲಾಯಿಸಲು ಕಾನೂನು ಸೇವೆಗಳ ಪ್ರಾಧಿಕಾರವು ಅಗತ್ಯ ಸಹಕಾರ ನೀಡುತ್ತಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬ ಹಿರಿಯರು ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್.ಯೋಗೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಹಿರಿಯ ನಾಗರಿಕರು ತಮ್ಮ ಹಕ್ಕುಗಳನ್ನು ಕಾನೂನು ಬದ್ಧವಾಗಿ ಚಲಾಯಿಸಲು ಕಾನೂನು ಸೇವೆಗಳ ಪ್ರಾಧಿಕಾರವು ಅಗತ್ಯ ಸಹಕಾರ ನೀಡುತ್ತಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬ ಹಿರಿಯರು ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್.ಯೋಗೇಶ್ ಹೇಳಿದರು.ಅವರು ಮಂಗಳವಾರ ನಗರದ ಅಜ್ಜರಕಾಡು ಹಿರಿಯ ನಾಗರಿಕರ ಕಚೇರಿ ಕಟ್ಟಡದಲ್ಲಿ ಜಿಲ್ಲಾ ಕಾನೂನು ಸೇವೆಗಳ

ಪ್ರಾಧಿಕಾರ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಜಾಗೃತಿ ದಿನದ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರ ರಕ್ಷಣೆಗಾಗಿ ಪ್ರತ್ಯೇಕ ಕಾಯ್ದೆಗಳನ್ನು ಜಾರಿಗೊಳಿಸಿದೆ. ಅವರುಗಳ ಶ್ರೇಯೋಭಿವೃದ್ಧಿಗೆ ಹಲವು ಸೌಲಭ್ಯಗಳನ್ನು ನೀಡಿದೆ. ಇವುಗಳ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದ ಅವರು, ಪ್ರತಿ ಜಿಲ್ಲೆಯಲ್ಲಿಯೂ ಹಿರಿಯ ನಾಗರಿಕರ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ, ಹಿರಿಯ ನಾಗರಿಕರಿಗೆ ಇಲಾಖೆಯಿಂದ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಉಪ ಕಾನೂನು ನೆರವು ಅಭಿರಕ್ಷಕ ಶ್ರೀನಿವಾಸ ಉಪಾಧ್ಯ ಬಿ, ಸಹಾಯಕ ಕಾನೂನು ನೆರವು ಅಭಿರಕ್ಷಕಿ ಭಾನುಮತಿ ಎಂ.ಆರ್ ನಾಯರಿ ಹಾಗೂ ಸಹಾಯಕ ಕಾನೂನು ನೆರವು ಅಭಿರಕ್ಷಕಿ ಶ್ವೀನಿ ಜೆಸಿಮಾ ಡಿ ಸೋಜ ಹಿರಿಯ ನಾಗರಿಕರ ಪಾಲನೆ, ಪೋಷನೆ ಹಾಗೂ ರಕ್ಷಣಾ ಕಾಯಿದೆಯ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಸದಾನಂದ ಹೆಗಡೆ, ಹಿರಿಯ ನಾಗರಿಕರುಗಳು, ಸಂಘದ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ನಾಗರಿಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ನಾಗರಾಜ್ ರಾವ್ ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಉಪಾಧ್ಯಕ್ಷ ಮುರಳೀಧರ್ ವಂದಿಸಿದರು.