ಸಾರಾಂಶ
ವೃಕ್ಷೊಥಾನ್ ಹೆರಿಟೇಜ್ ರನ್-2023 ಕ್ರೇಜ್ ಹೆಚ್ಚಾಗ ತೊಡಗಿದ್ದು, ದೇಶದ ಮೂಲೆ ಮೂಲೆಗಳಿಂದ ಈಗಲೂ ಹಿರಿಯ ನಾಗರಿಕರು ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ವೃಕ್ಷೊಥಾನ್ ಹೆರಿಟೇಜ್ ರನ್-2023 ಕ್ರೇಜ್ ಹೆಚ್ಚಾಗ ತೊಡಗಿದ್ದು, ದೇಶದ ಮೂಲೆ ಮೂಲೆಗಳಿಂದ ಈಗಲೂ ಹಿರಿಯ ನಾಗರಿಕರು ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.ಪುಣೆಯ 66 ವರ್ಷದ ಶರದ ಚವ್ಹಾಣ ಈಗ ಮ್ಯಾರಾಥಾನ್‌ನಲ್ಲಿ ಹಿರಿಯರ ವಿಭಾಗದಲ್ಲಿ ಅವರದೇ ಆದ ಸಾಧನೆಯ ಮೂಲಕ ಹೆಸರು ಮಾಡಿದ್ದಾರೆ. ಸೇವಾ ನಿವೃತ್ತಿಯ ಬಳಿಕ 60ನೇ ವಯಸ್ಸಿಗೆ ಮ್ಯಾರಾಥಾನ್ ಕುರಿತು ಆಸಕ್ತಿ ಬೆಳೆಸಿಕೊಂಡಿರುವ ಕಿರಣ ಎಂಬುವರು ಈಗ ಈ ಬಾರಿಯ ವೃಕ್ಷೋಥಾನ್ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2017ರಲ್ಲಿ ಮಹಾರಾಷ್ಟ್ರದ ಸಾತಾರದಲ್ಲಿ ನಡೆದ ಗುಡ್ಡಗಾಡು ಮ್ಯಾರಾಥಾನ್ ನಲ್ಲಿ ಪಾಲ್ಗೊಂಡು ಗಮನ ಸೆಳೆದ ನಂತರ ಇವರು ಈಗ ಹಲವಾರು ಓಟಗಳಲ್ಲಿ ಪಾಲ್ಗೊಂಡಿದ್ದಾರೆ.
ಜಗತ್ತಿನಲ್ಲಿಯೇ ಅತೀ ಹೆಚ್ಚಿನ ಎತ್ತರ ಪ್ರದೇಶಗಳಲ್ಲೊಂದು ಹಾಗೂ ಓಟಗಾರರಿಗೆ ಅತ್ಯಂತ ಕಠಿಣವಾಗಿರುವ ಲಡಾಕ್ ಸೇರಿದಂತೆ ಈವರೆಗೆ ಇವರು 32 ನಾನಾ ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡ ಹಿರಿಯ ಓಟಗಾರ ಎಂದೂ ಹೆಸರು ಮಾಡಿದ್ದಾರೆ. ಟಾಟಾ ಪ್ರೊಕ್ಯಾಮ್ ಆಯೋಜಿಸುವ ಫುಲ್ ಮ್ಯಾರಾಥಾನ್ ಗಳಲ್ಲಿಯೂ ಪಾಲ್ಗೊಂಡಿರುವ ಅವರು, ಬೆಂಗಳೂರು, ದೆಹಲಿ, ಕೊಲ್ಕೊತಾ ಮತ್ತು ಮುಂಬೈಗಳಲ್ಲಿ ನಡೆದ ಮ್ಯಾರಾಥಾನ್ ಗಳಲ್ಲಿ ಭಾಗಿಯಾಗಿದ್ದಾರೆ.ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದ ಡುಯಾಥ್ಲಾನ್ ನಲ್ಲಿ ಪಾಲ್ಗೊಂಡಿರುವ ಅವರು, ಈ ಕ್ರೀಡೆಯ ಭಾಗವಾಗಿ 10 ಕಿಮೀ ಓಟ, 40 ಕಿಮೀ. ಸೈಕ್ಲಿಂಗ್ ಮತ್ತು 5 ಕಿಮೀ ಓಟ ಓಡುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಇದೇ ಡಿಸೆಂಬರ್ 3 ರಂದು ಪುಣೆ- ಲೋನಾವಾಲಾ ನಲ್ಲಿ ಐಎಸ್ ಆಯೋಜಿಸಿದ್ದ ಅಥ್ಲೆಟಿಕ್ಸ್ ನಲ್ಲಿ 100 ಕಿ. ಮೀ. ಸೈಕ್ಲಿಂಗ್ ಪೂರ್ಣಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈಗ ಇವರು ವಿಜಯಪುರದಲ್ಲಿ ಡಿಸೆಂಬರ್ 24 ರಂದು ನಡೆಯಲಿರುವ 21 ಕಿ. ಮೀ. ಮ್ಯಾರಾಥಾನ್ ನಲ್ಲಿ ಪಾಲ್ಗೋಳ್ಳುತ್ತಿದ್ದು, ಯುವಕರಿಗೂ ಸ್ಪೂರ್ತಿ ನೀಡಲಿದ್ದಾರೆ.