ಚಂದ್ರಮತಿಯವರ ''ದುಪಡಿ'''' ಕಾದಂಬರಿ ಬಿಡುಗಡೆ

| Published : Jan 22 2024, 02:19 AM IST

ಚಂದ್ರಮತಿಯವರ ''ದುಪಡಿ'''' ಕಾದಂಬರಿ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಆತ್ಮಕತೆಯ ಸ್ವರೂಪದಲ್ಲಿರುವ ಈ ಕೃತಿ ಹವ್ಯಕ ನುಡಿಗಟ್ಟನ್ನು ಬಳಸಿಕೊಂಡು ರಚಿತವಾಗಿರುವುದು ವಿಶೇಷ. ಇದು ಒಂದು ಸಮುದಾಯದ ಹೆಣ್ಣಿನ ಆತ್ಮಕತೆ. ಒಂದು ಮನೆಯ; ಒಂದು ಊರಿನ ಕತೆಯೂ ಹೌದು. ಕತೆ ಹೇಳುವ ಹೆಣ್ಣು ಮನಸ್ಸು ಒಂದು ಕಾಲಘಟ್ಟದ ನಾಡಿನ ಕತೆಯನ್ನು, ದೇಶದ ಕತೆಯನ್ನು ಹೇಳುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜ್ಯೋತಿ ಪ್ರಕಾಶನ ಪ್ರಕಟಿಸಿರುವ, ಹಿರಿಯ ಲೇಖಕಿ ಡಾ. ಚಂದ್ರಮತಿ ಸೋಂದ ಅವರ ಮೊದಲ ಕಾದಂಬರಿ '' ದುಪಡಿ''ಬಿಡುಗಡೆಯಾಯಿತು.

ಲೇಖಕಿಯ ಸಹೋದರ ಡಾ. ಮಹೇಶ್ ರಾವ್ ನಿವಾಸದಲ್ಲಿ ಕುಟುಂಬ ಸದಸ್ಯರು, ಸಾಹಿತ್ಯ ಹಿತೈಷಿಗಳು ಭಾಗವಹಿಸಿದ್ದ ಆಪ್ತ ಕಾರ್ಯಕ್ರಮದಲ್ಲಿ ಹಿರಿಯ ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ ಅವರು ''ದುಪಡಿಯನ್ನು ಓದುಗರಿಗೆ ಹೊದಿಸಿದರು.

ಆತ್ಮಕತೆಯ ಸ್ವರೂಪದಲ್ಲಿರುವ ಈ ಕೃತಿ ಹವ್ಯಕ ನುಡಿಗಟ್ಟನ್ನು ಬಳಸಿಕೊಂಡು ರಚಿತವಾಗಿರುವುದು ವಿಶೇಷ. ಇದು ಒಂದು ಸಮುದಾಯದ ಹೆಣ್ಣಿನ ಆತ್ಮಕತೆ. ಒಂದು ಮನೆಯ; ಒಂದು ಊರಿನ ಕತೆಯೂ ಹೌದು. ಕತೆ ಹೇಳುವ ಹೆಣ್ಣು ಮನಸ್ಸು ಒಂದು ಕಾಲಘಟ್ಟದ ನಾಡಿನ ಕತೆಯನ್ನು, ದೇಶದ ಕತೆಯನ್ನು ಹೇಳುತ್ತದೆ. ಆ ಮೂಲಕ ಇಡೀ ಸಂಸ್ಕೃತಿಯ ಆತ್ಮಕತೆಯಂತೆಯೂ ಕಾಣುತ್ತದೆ, ಎಂದು ವಿಶ್ಲೇಷಿಸಿದರು.

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅರ್ಥಪೂರ್ಣವಾಗಿ ಬರೆಯುತ್ತಿರುವವರಲ್ಲಿ ಹೆಣ್ಣು ಮಕ್ಕಳೇ ಹೆಚ್ಚು. ದುಪಡಿ ಚಂದ್ರಮತಿ ಅವರೊಬ್ಬರ ಕತೆಯಲ್ಲ. ಅವರು ಬದುಕಿರುವ ಕಾಲಘಟ್ಟದ ಎಲ್ಲಾ ಹೆಣ್ಣುಮಕ್ಕಳು ಬರೆಯಬೇಕು ಅಂದುಕೊಂಡ ಕತೆ. ಹಲವು ವಿಷಯ,ವೈವಿಧ್ಯಗಳ ದಾಖಲೀಕರಣವೂ ಹೌದು, ಎಂದು ಶ್ಲಾಘಿಸಿದರು.

ನಮ್ಮನ್ನು ರೂಪಿಸಿದ ಬದುಕಿನ ಕುರುಹುಗಳೆಲ್ಲ ಕಾಲ ಕಳೆದಂತೆ ನಿರ್ದಾಕ್ಷಿಣ್ಯವಾಗಿ ಅಳಸಿಹೋಗುತ್ತಿವೆ. ಅಂತೆಯೇ, ಸುಶಿಕ್ಷಿತರ ಮನೆಗಳಲ್ಲೆ ಕನ್ನಡ ಓದುವವರು ಕಡಿಮೆಯಾಗುತ್ತಿದ್ದಾರೆ. ಭಾಷೆಯ ಜೊತೆಗೆ ನೆನಪುಗಳೆಲ್ಲ ಹಾರಿಹೋಗುತ್ತಿರುವ ಈ ಹೊತ್ತಿನಲ್ಲಿ ಅವುಗಳನ್ನು ಹಿಡಿದಿಟ್ಟುಕೊಳ್ಳುವ; ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂಥ ಪ್ರಯತ್ನಗಳು ಮುಖ್ಯ ಎಂದು ಹೇಳಿದರು.

ವಿಜಯಪುರ ಮಹಿಳಾ ವಿವಿ ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ , ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆ ಮಾಜಿ ನಿರ್ದೇಶಕಿ ಪ್ರೊ. ಪ್ರೀತಿ ಶುಭಚಂದ್ರ ಅವರು ಕಾದಂಬರಿಯ ಕುರಿತು ಮಾತನಾಡಿದರು.

ಡಾ. ರಾಮಕೃಷ್ಣ ಜೋಷಿ, ಡಾ. ಮಹೇಶ್ ರಾವ್, ಹಿರಿಯ ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಅವರು ಮೊದಲ ಪ್ರತಿಗಳನ್ನು ಸ್ವೀಕರಿಸಿದರು. ವಿಜಯಾ ರಾವ್ ಸ್ವಾಗತಿಸಿದರು. ಅಲಕ ಕಟ್ಟೆಮನೆ ನಿರೂಪಿಸಿದರು.