ಹಿರಿಯ ಸಾಹಿತಿ ಪ್ರೊ.ಕೃಷ್ಣೇಗೌಡಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ

| Published : Nov 11 2024, 12:47 AM IST

ಹಿರಿಯ ಸಾಹಿತಿ ಪ್ರೊ.ಕೃಷ್ಣೇಗೌಡಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಂತ ಥೀಮ್ ಪಾರ್ಕಿನಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಕೋಟ ಶಿವರಾಮ ಕಾರಂತ ಟ್ರಸ್ಟ್ ಮತ್ತು ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನಗಳು ಜಂಟಿಯಾಗಿ ಆಯೋಜಿಸಿದ 20ನೇ ವರ್ಷದ ಕೋಟ ಶಿವರಾಮ ಕಾರಂತ ಜನ್ಮದಿನೋತ್ಸವದಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೋಟ

ಕಾರಂತರು ಹುಟ್ಟಿದ ನೆಲದಲ್ಲಿ ಕಾರಂತರ ಹೆಸರಿನ ಪ್ರಶಸ್ತಿಯು ನನ್ನ ಗೌರವವನ್ನು ಉತ್ತುಂಗಕ್ಕೆರಿಸಿದೆ ಎಂದು ಖ್ಯಾತ ವಾಗ್ಮಿ, ಸಾಹಿತಿ ಪ್ರೋ.ಕೃಷ್ಣೇಗೌಡ ಮೈಸೂರು ಹೇಳಿದರು.ಅವರು ಭಾನುವಾರ ಇಲ್ಲಿನ ಕಾರಂತ ಥೀಮ್ ಪಾರ್ಕಿನಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಕೋಟ ಶಿವರಾಮ ಕಾರಂತ ಟ್ರಸ್ಟ್ ಮತ್ತು ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನಗಳು ಜಂಟಿಯಾಗಿ ಆಯೋಜಿಸಿದ 20ನೇ ವರ್ಷದ ಕೋಟ ಶಿವರಾಮ ಕಾರಂತ ಜನ್ಮದಿನೋತ್ಸವದಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಕಾರಂತರಂತಹ ಶ್ರೇಷ್ಠ ಸಾಹಿತಿ ಹುಟ್ಟಿರುವುದು ಈ ಮಣ್ಣಿನ ತಾಕತ್ತು, ಇದನ್ನು ಮತ್ತೆಲ್ಲಿ ಕಾಣಲು ಸಾಧ್ಯ. ಕಾರಂತರೆಂದರೆ ಬಹುಮುಖ ವ್ಯಕ್ತಿತ್ವದ ಅಪರೂಪದ ಶಕ್ತಿಯಾಗಿದ್ದರು. ಅವರಂತೆ ಬೇರೆ ಯಾರೂ ಇರುವುದಕ್ಕೆ ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ ಎಂಬಂತೆ ಅವರು ಬದುಕಿ ತೊರಿಸಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ಸಾಬೀತು ಮಾಡಿದ್ದಾರೆ. ಅಂತಹ ಕಾರಂತರ ಹುಟ್ಟೂರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಜೀವನದಲ್ಲಿ ಸಾರ್ಥಕ್ಯ ಕಂಡ ಅನುಭವವಾಗುತ್ತಿದೆ ಎಂದರು.ಈ ಪ್ರಶಸ್ತಿ ಪ್ರದಾನ ಮಾಡಿದ ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯ ಶಂಕರ್ ಮಾತನಾಡಿ, ಕಾರಂತರ ಬದುಕು, ಅವರ ಹೋರಾಟದ ದಾರಿ ಹಲವು ಮಜಲುಗಳಲ್ಲಿದೆ. ಅವರೊಬ್ಬ ಅಪರೂಪದ ಕನ್ನಡ ನಾಡೇ ಗೌರವ ನೀಡುವ ವ್ಯಕ್ತಿತ್ವವಾಗಿದ್ದರು. ಕೃಷ್ಣನ ನಾಡಿನಲ್ಲಿ ಕೃಷ್ಣನಿಗೆ ಈ ಗೌರವ ದೊರೆತ್ತಿರುವುದು ವಿಶೇಷವಾಗಿದೆ. ಅಲ್ಲದೆ ಕಾರಂತರ ಹೆಸರಿನಲ್ಲಿ ಅವರು ಹುಟ್ಟಿದ ಊರಿನ ಪಂಚಾಯಿತಿ ನೀಡುವ ಪ್ರಶಸ್ತಿ ಎನ್ನುವುದು ಎಲ್ಲ ಪಂಚಾಯಿತಿಗಳಿಗೆ ತಮ್ಮ ಮಣ್ಣಿನ ಸಾಧಕರನ್ನು ಗೌರಸಿಸುವುದಕ್ಕೆ ಮಾದರಿಯಾಗಿದೆ ಎಂದರು.

ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ಅವಿಭಜಿತ ಜಿಲ್ಲೆಗಳ 22 ಸಾಧಕ ಗ್ರಾಮ ಪಂಚಾಯಿತಿಗಳಿಗೆ ಕಾರಂತ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಅತಿಥಿಗಳಾಗಿ ಕಾಪು ಶಾಸಕ ಸುರೇಶ್ ಶೆಟ್ಟಿ, ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ವಂದ್ರ ಆಗಮಿಸಿದ್ದರು.

ಆಯ್ಕೆ ಸಮಿತಿಯ ಸಂಚಾಲಕ ಯು.ಎಸ್. ಶೆಣೈ, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಉಪಸ್ಥಿತರಿದ್ದರು. ಕಾರಂತ ಹುಟ್ಟೂರ ಪ್ರಶಸ್ತಿ ರೂವಾರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಶಸ್ತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿ, ವಂದಿಸಿದರು.