-ಅಂತಿಮ ಯಾತ್ರೆಯಲಿ ಜನಸ್ತೋಮ । ಹಿರಿಯ ನಾಯಕ ಬಸವರಾಜಪ್ಪಗೌಡ ದರ್ಶನಾಪುರ ಪಂಚಭೂತಗಳಲ್ಲಿ ಲೀನ
----ಕನ್ನಡಪ್ರಭ ವಾರ್ತೆ ಶಹಾಪುರ
ಶ್ರೀಶೈಲ ಮಲ್ಲಯ್ಯನ ಪರಮಭಕ್ತ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಶ್ರೀಚರಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಸವರಾಜಪ್ಪಗೌಡ ದರ್ಶನಾಪುರ (84) ಗುರುವಾರ ಬೆಳಗಿನ ಜಾವ 4 ಗಂಟೆಗೆ ನಿಧನರಾದರು. ಅವರ ನಿಧನದಿಂದಾಗಿ ಶಹಾಪುರ ಕ್ಷೇತ್ರದಲ್ಲಿ ಶೋಕದ ಛಾಯೆ ಆವರಿಸಿದೆ.ಮಾಜಿ ಸಚಿವ, ಶಾಸಕ ಶರಣಬಸಪ್ಪಗೌಡ ದರ್ಶನಾಪುರರ ಚಿಕ್ಕಪ್ಪರಾದ ಬಸವರಾಜಪ್ಪಗೌಡ ದರ್ಶನಾಪುರರನ್ನು ಕ್ಷೇತ್ರದ ಜನ ದೊಡ್ಡಗೌಡರು ಎಂದೇ ಕರೆಯುತ್ತಿದ್ದರು.
ತಾಲೂಕಿನ ಸ್ವಗ್ರಾಮ ದರ್ಶನಾಪುರದಲ್ಲಿಯೇ ಜನಿಸಿದ ಬಸವರಾಜಪ್ಪಗೌಡರು, ಧಾರ್ಮಿಕ ಸೇವೆ, ಶಿಕ್ಷಣ ಹಾಗೂ ಸಮಾಜ ಸೇವೆಯನ್ನು ಜೀವನದ ಧ್ಯೇಯವಾಗಿಸಿಕೊಂಡಿದ್ದರು.
ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ತಮ್ಮ ಆರಾಧ್ಯ ದೈವವೆಂದು ಭಾವಿಸಿದ್ದ ಅವರು, ಪ್ರತಿವರ್ಷ ಶಿವರಾತ್ರಿ ಹಾಗೂ ಯುಗಾದಿ ಜಾತ್ರೆಯ ಸಂದರ್ಭದಲ್ಲಿ ಶ್ರೀಶೈಲದಲ್ಲಿಯೇ ಒಂದು ತಿಂಗಳ ಕಾಲ ವಾಸ್ತವ್ಯ ಹೊಂದಿ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಡಿಸುತ್ತಿದ್ದರು.
ವರ್ಷಕ್ಕೆ ಎರಡು ಬಾರಿ ನಡೆಯುತ್ತಿದ್ದ ಈ ಸೇವೆಯಿಂದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರ ಮನಸೂರೆಗೊಂಡಿದ್ದರು.ಅವರ ನಿಸ್ವಾರ್ಥ ಸೇವೆಯಿಂದಾಗಿಯೇ ಭಕ್ತರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದು, “ಅನ್ನದಾಸೋಹಿ” ಎಂಬ ಹೆಸರಿನಿಂದಲೇ ಜನಮನದಲ್ಲಿ ಗುರುತಿಸಿಕೊಂಡಿದ್ದರು. ಧಾರ್ಮಿಕ ಸೇವೆಯ ಜೊತೆಗೆ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಶ್ರೀಚರಬಸವೇಶ್ವರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಡ ಹಾಗೂ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಶ್ರಮಿಸಿದ್ದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿಯೂ ಜನಪರ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಸರಳ ಜೀವನ, ಶಿಕ್ಷಣ ಸೇವೆ ಮತ್ತು ಧಾರ್ಮಿಕ ನಿಷ್ಠೆಯಿಂದ ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನ ಗಳಿಸಿದ್ದರು.ಬಸವರಾಜಪ್ಪ ಗೌಡರ ಅಗಲಿಕೆಯಿಂದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅವರ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಅಂತಿಮ ಯಾತ್ರೆಗೆ ಆಗಮಿಸಿದ ಸಹಸ್ರಾರು ಜನರಿಗೆ ಉಪಾಹಾರ, ಚಹಾ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
.....ಬಾಕ್ಸ್ ...ದರ್ಶನಾಪುರದ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ
ಶಹಾಪುರ ತಾಲೂಕಿನ ದರ್ಶನಾಪುರ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಸಂಜೆ 6 ಗಂಟೆಗೆ ಅಂತ್ಯಕ್ರಿಯೇ ಧಾರ್ಮಿಕ ವಿಧಿವಿಧಾನ ಪ್ರಕಾರ ಜರುಗಿತು.ಅಂತ್ಯಕ್ರಿಯೆಯಲ್ಲಿ ಸಹಸ್ರಾರು ಜನರು ಭಾಗವಹಿಸಿದ್ದರು.
ಗುರುಮಠಕಲ್, ಯಾದಗಿರಿ, ಸುರಪುರ ಶಾಸಕರು ಸೇರಿದಂತೆ ಶಾಸಕರಾದ ಬಾದರ್ಲಿ ಹಂಪಣ್ಣಗೌಡ, ಸಿ.ಎಸ್.ನಾಡಗೌಡ ಮತ್ತು ರಾಯಚೂರ ಸಂಸದ ಕುಮಾರನಾಯಕ, ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳಿ ಸೇರಿದಂತೆ ಗಣ್ಯರು, ಅಧಿಕಾರಿಗಳು ಭಾಗವಹಿಸಿ ಅಂತಿಮ ದರ್ಶನ ಪಡೆದರು. ಮಾಜಿ ಸಚಿವ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಬಸವರಾಜಪ್ಪಗೌಡರ ಸುಪುತ್ರರಾದ ಗುರುರಡ್ಡಿಗೌಡ ದರ್ಶನಾಪುರ, ಸಂಜೀವರಡ್ಡಿ ಗೌಡ ದರ್ಶನಾಪುರ ಹಾಗೂ ಅಮರೇಶಗೌಡ ದರ್ಶನಾಪುರ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು.