ಜೆಡಿಎಸ್ ಪಕ್ಷ ಸಿಕ್ಕಿರುವ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಜೊತೆಗೆ ಜನರಿಗೆ ಸೇವೆ ಸಲ್ಲಿಸುವ ಕೆಲಸ ಮಾಡುತ್ತಿಲ್ಲ. ಬದಲಿಗೆ ಅಧ್ಯಕ್ಷರ ಬದಲಾವಣೆಯಲ್ಲಿಯೇ ಕಾಲ ಹರಣ ಮಾಡುತ್ತಿದೆ. ಹಾಗಾಗಿ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಬಿಡದಿ ಸೊಸೈಟಿ ಮಾದರಿಯಲ್ಲಿಯೇ ಪುರಸಭೆಯ ಎಲ್ಲ ಜೆಡಿಎಸ್ ಸದಸ್ಯರು ರಾಜೀನಾಮೆ ನೀಡಿ ಉಪಕಾರ ಮಾಡಲಿ ಎಂದರು.

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಪಕ್ಷದ ಆಡಳಿತ ವೈಫಲ್ಯದಿಂದಾಗಿ ಅನಾಥಪ್ರಜ್ಞೆ ಕಾಡುತ್ತಿದೆ. ಆಡಳಿತ ನಡೆಸುವಲ್ಲಿ ಅಸಮರ್ಥರಾಗಿದ್ದೇವೆಂದು ಒಪ್ಪಿಕೊಂಡು ಜೆಡಿಎಸ್ ಸದಸ್ಯರು ರಾಜೀನಾಮೆ ಕೊಟ್ಟು ಹೊರ ಬರಲಿ. ನಾವು (ಕಾಂಗ್ರೆಸ್)ಜನ ಪರ ಮತ್ತು ಅಭಿವೃದ್ಧಿ ಪರ ಆಡಳಿತ ಮಾಡಿ ತೋರಿಸುತ್ತೇವೆ ಎಂದು ವಿಪಕ್ಷ ನಾಯಕ ಸಿ.ಉಮೇಶ್ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಪುರಸಭೆಯಲ್ಲಿ ಆಡಳಿತಾರೂಢ ಜೆಡಿಎಸ್ ಪಕ್ಷ ತೆರಿಗೆ ಸಂಗ್ರಹ, ಪಟ್ಟಣದ ಅಭಿವೃದ್ಧಿ ಹಾಗೂ ಜನರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇವರ ಅಸಮರ್ಥ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್ ಪಕ್ಷ ಸಿಕ್ಕಿರುವ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಜೊತೆಗೆ ಜನರಿಗೆ ಸೇವೆ ಸಲ್ಲಿಸುವ ಕೆಲಸ ಮಾಡುತ್ತಿಲ್ಲ. ಬದಲಿಗೆ ಅಧ್ಯಕ್ಷರ ಬದಲಾವಣೆಯಲ್ಲಿಯೇ ಕಾಲ ಹರಣ ಮಾಡುತ್ತಿದೆ. ಹಾಗಾಗಿ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಬಿಡದಿ ಸೊಸೈಟಿ ಮಾದರಿಯಲ್ಲಿಯೇ ಪುರಸಭೆಯ ಎಲ್ಲ ಜೆಡಿಎಸ್ ಸದಸ್ಯರು ರಾಜೀನಾಮೆ ನೀಡಿ ಉಪಕಾರ ಮಾಡಲಿ ಎಂದರು.

₹15 - ₹20 ಕೋಟಿ ತೆರಿಗೆ ವಸೂಲಿ ಬಾಕಿ:

ಸಂವಿಧಾನ ಬದ್ಧವಾಗಿ ಜನರಿಂದ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಸಿಕ್ಕಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಸರ್ಕಾರದ ಅನುದಾನ ಹಾಗೂ ತೆರಿಗೆ ಹಣದಿಂದ ಅಭಿವೃದ್ಧಿ ಮಾಡಲು ಸಂಪೂರ್ಣ ಅವಕಾಶ ಇದೆ. ಸುಮಾರು ₹15 - ₹20 ಕೋಟಿ ಗಳಷ್ಟು ತೆರಿಗೆ ಹಣವೇ ಪುರಸಭೆಗೆ ಬರಬೇಕಿದೆ. ಆ ತೆರಿಗೆಯನ್ನು ಇಲ್ಲಿವರೆಗೂ ಏಕೆ ಸಂಗ್ರಹ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದಲೇ ಬಿಡದಿ ಪುರಸಭೆಗೆ ಎರಡು ವರ್ಷಗಳ ತೆರಿಗೆ ಹಣ ಸುಮಾರು ₹6 - ₹7 ಕೋಟಿ ಬಾಕಿ ಇದೆ. ಈ ಹಣ ತರಲು ಮೂವರು ಜೆಡಿಎಸ್ ಅಧ್ಯಕ್ಷರ ಪೈಕಿ ಯಾರ್ಯಾರು ಎಷ್ಟು ಬಾರಿ ಕೆಐಎಡಿಬಿ ಕಚೇರಿಗೆ ಹೋಗಿ ಚರ್ಚೆ ನಡೆಸಿದ್ದಾರೆಂದು ಹೇಳಲಿ.

ರಾಜ್ಯಸರ್ಕಾರ ಕೈಗಾರಿಕಾ ಪ್ರದೇಶಗಳ ತೆರಿಗೆ ಹಣದಲ್ಲಿ ಶೇ.70ರಷ್ಟು ಕೆಐಐಡಿಬಿ ಮತ್ತು ಶೇ.30ರಷ್ಟು ಪುರಸಭೆಗೆ ನೀಡಬೇಕೆಂದು ಆದೇಶಿಸಿತ್ತು. ಆಗ ಕೆಐಎಡಿಬಿಯೇ ಬಿಡದಿ ಕೈಗಾರಿಕಾ ಪ್ರದೇಶದ ಶೇಕಡ 100ರಷ್ಟು ತೆರಿಗೆ ಹಣ ಕಟ್ಟಿಸಿಕೊಂಡಿತ್ತು. ಅದರಲ್ಲಿನ ಶೇ.30ರಷ್ಟು ತೆರಿಗೆ ಹಣವನ್ನು ಪುರಸಭೆಗೆ ಇಲ್ಲಿವರೆಗೂ ವರ್ಗಾವಣೆ ಮಾಡಿಲ್ಲ ಎಂದು ಹೇಳಿದರು.

ಇನ್ನು ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಕಾರ್ಖಾನೆಗಳು ತೆರಿಗೆ ವಂಚಿಸುತ್ತಿವೆ. ಬಸವೇಶ್ವರ ಶಾಲೆಯ ₹3 ಕೋಟಿ ತೆರಿಗೆ ವಿಚಾರವಾಗಿ ಎರಡು ತಿಂಗಳಿಂದ ಸರ್ಕಸ್ ನಡೆಯುತ್ತಿದೆ. ಬಿಡದಿಯಲ್ಲಿ 22 ಸಾವಿರ ಆಸ್ತಿಗಳಿದ್ದು, ಇದರಲ್ಲಿ 10- 11 ಸಾವಿರ ಆಸ್ತಿಗಳು ಬಿ ಖಾತೆ ಆಗುವುದು ಇನ್ನೂ ಬಾಕಿ ಇದೆ. ಫಿಲಂ ಸಿಟಿ ವಿಚಾರದಲ್ಲಿ ಸಾಕಷ್ಟು ಬೋಗಸ್ ನಡೆದಿದ್ದು, ಇಲ್ಲಿವರೆಗೂ ತೆರಿಗೆ ಪಾವತಿಯೇ ಆಗಿಲ್ಲ. ಇದರ ವಸೂಲಿ ಬಗ್ಗೆ ಯಾರೂ ಕ್ರಮ ವಹಿಸಿಲ್ಲ ಎಂದು ಟೀಕಿಸಿದರು.

ಸಾಕ್ಷಿಗುಡ್ಡೆ ಬೇಡ, ಕನಿಷ್ಠ ಕರ್ತವ್ಯ ನಿರ್ವಹಿಸಿ ಸಾಕು:

ಸಚಿವ ಬಾಲಕೃಷ್ಣರವರು ರೇಷ್ಮೆ ಇಲಾಖೆಗೆ ಸೇರಿದ ಜಾಗವನ್ನು ಪುರಸಭೆ ನೂತನ ಕಚೇರಿ ನಿರ್ಮಾಣಕ್ಕೆ ಮಂಜೂರು ಮಾಡಿಸಿದರು. ಅದೇ ಇಲಾಖೆಗೆ ಸೇರಿರುವ 12- 14 ಎಕರೆ ಜಾಗದಲ್ಲಿ ಅಂದಾಜು ₹270 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿವೆ. ನಲ್ಲಿಗುಡ್ಡೆ ಕೆರೆಯನ್ನು ₹25 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ.

ಬಿಡದಿ ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರುವ ಸಾಧ್ಯತೆಗಳಿರುವ ಕಾರಣ ₹20 ಕೋಟಿ ವೆಚ್ಚದಲ್ಲಿ ಪುರಸಭೆ ಕಚೇರಿ ಕಟ್ಟಡ ನಿರ್ಮಿಸಲಾಗುತ್ತಿದೆ. ಬಿಡದಿ ಪಟ್ಟಣದ ಅಭಿವೃದ್ಧಿಗೆ ₹78 ಕೋಟಿ ಡಿಪಿಆರ್ ಮಾಡಿಸಲಾಗಿದ್ದು, ಕಸದ ಸಮಸ್ಯೆಗೆ ಮುಕ್ತಿ ಕೊಡಿಸಿದ್ದಾರೆ. ಬಿಜಿಎಸ್ ರಸ್ತೆ ನಿರ್ಮಾಣ ಮಾಡಿಸಿದ್ದು ಯಾರು. ''''ಬಿ'''' ಖಾತೆಗಳಿಂದಾಗಿ ಪುರಸಭೆಗೆ ₹15- ₹20 ಕೋಟಿ ಹಣ ಬರಲು ಯಾವ ಸರ್ಕಾರ ಕಾರಣವೆಂದು ಜೆಡಿಎಸ್ ನವರು ಹೇಳಲಿ ಎಂದು ಸವಾಲು ಹಾಕಿದರು.

ಅಧ್ಯಕ್ಷರ ಬದಲಾವಣೆಯೇ ದೊಡ್ಡ ಸಾಧನೆ:

ಪುರಸಭೆಯಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಪಕ್ಷದವರು ಸಾಕ್ಷಿಗುಡ್ಡೆ ತೋರಿಸುವುದು ಬೇಡ, ಕನಿಷ್ಠ ಕರ್ತವ್ಯಗಳನ್ನು ನಿರ್ವಹಿಸುವಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಅಭಿವೃದ್ಧಿಗಿಂತ ಹೆಚ್ಚಾಗಿ ಅಧ್ಯಕ್ಷರ ಬದಲಾವಣೆಯಲ್ಲಿ ಕಾಲಹರಣ ಮಾಡಿದ್ದೆ ದೊಡ್ಡ ಸಾಧನೆ ಎಂದು ಲೇವಡಿ ಮಾಡಿದರು.

ಸಚಿವ ಬಾಲಕೃಷ್ಣ ಮತ್ತು ಕಾಂಗ್ರೆಸ್ ಸದಸ್ಯರು ಸಹಕಾರ ನೀಡದೆ ಹೋಗಿದ್ದರೆ ಕೋಟ್ಯಂತರ ರುಪಾಯಿಗಳ ಟೆಂಡರ್ ಪ್ರಕ್ರಿಯೆ ಮುಗಿಸಿ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯುತ್ತಿತ್ತು. ಜೆಡಿಎಸ್ ನವರು ಈಗಲೂ ಅದೇ ಶಾಸಕರನ್ನು ಉಪಯೋಗಿಸಿಕೊಂಡು ಏಕೆ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಸಿ.ಉಮೇಶ್ ಪ್ರಶ್ನಿಸಿದರು.

---

ಬಿಡದಿ ಪುರಸಭೆಯ ಹಳೆ ಕಚೇರಿ ಬಗ್ಗೆ ಕೇಳುವವರೆ ಇಲ್ಲ. ಬಿಡದಿ ಮುಖ್ಯ ರಸ್ತೆ ಅಭಿವೃದ್ಧಿಗೆ ₹90 ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆದು ವರ್ಕ್ ಆರ್ಡರ್ ಕೊಡಲಾಗಿದೆ. ಇಲ್ಲಿವರೆಗೂ ಏಕೆ ಕಾಮಗಾರಿ ಪ್ರಾರಂಭಿಸಿಲ್ಲ? ವೈಫಲ್ಯಕ್ಕೆ ಯಾರು ಹೊಣೆಗಾರರು? ತೆರಿಗೆ ಹಣ ವಸೂಲಿಯಲ್ಲಿ ಅಸಮರ್ಥವಾಗಿರುವ ಜೆಡಿಎಸ್ ಪಕ್ಷ ಅಧಿಕಾರ ಬಿಟ್ಟು ಕೆಳಗಿಳಿಯಲಿ.

- ಸಿ.ಉಮೇಶ್, ವಿಪಕ್ಷ ನಾಯಕರು, ಬಿಡದಿ ಪುರಸಭೆ.