ಕೊಡವರಿಗೆ ಪ್ರತ್ಯೇಕ ಸ್ವಾಯತ್ತತೆ: ಮಧ್ಯಂತರ ಅರ್ಜಿ ವಿಚಾರಿಸಿದ ಹೈಕೋರ್ಟ್‌

| Published : Apr 02 2024, 01:05 AM IST

ಕೊಡವರಿಗೆ ಪ್ರತ್ಯೇಕ ಸ್ವಾಯತ್ತತೆ: ಮಧ್ಯಂತರ ಅರ್ಜಿ ವಿಚಾರಿಸಿದ ಹೈಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೊಡವರಿಗೆ ಪ್ರತ್ಯೇಕ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಲು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಲ್ಲಿಸಿರುವ ಮನವಿ ಪರಿಗಣಿವಂತೆ ಕೋರಿ ಬಿಜೆಪಿ ಮುಖಂಡ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿರೋಧಿಸಿ ಎಸ್ಸಿ, ಎಸ್‌ಟಿ, ಬುಡಕಟ್ಟು ಹಾಗೂ ಆದಿವಾಸಿ ಸಮುದಾಯಗಳು ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಅದನ್ನು ವಿಚಾರಣೆಗೆ ಪರಿಗಣಿಸಿ ವಿಭಾಗೀಯ ನ್ಯಾಯಪೀಠ ಆದೇಶಿಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಡವರಿಗೆ ಪ್ರತ್ಯೇಕ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕವಾಗಿ ಸ್ವಯಂ ರಾಜಕೀಯ ನಿರ್ಣಯಗಳ ಹಕ್ಕು ನೀಡಬೇಕೆಂಬ ಬೇಡಿಕೆ ಬಗ್ಗೆ ಪರಿಶೀಲಿಸಲು ಆಯೋಗವೊಂದನ್ನು ರಚಿಸಲು ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಕೊಡಗು ಜಿಲ್ಲೆಯ ಮೂಲ ನಿವಾಸಿ ಎಸ್ಸಿ, ಎಸ್‌ಟಿ, ಬುಡಕಟ್ಟು ಹಾಗೂ ಆದಿವಾಸಿ ಸಮುದಾಯಗಳು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್‌ ವಿಚಾರಣೆಗೆ ಪರಿಗಣಿಸಿದೆ.

ಕೊಡವರಿಗೆ ಪ್ರತ್ಯೇಕ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಲು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಲ್ಲಿಸಿರುವ ಮನವಿ ಪರಿಗಣಿಸಬೇಕು. ಈ ಸಂಬಂಧ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಸುವ ಪ್ರತ್ಯೇಕ ಆಯೋಗ ರಚಿಸಲು ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ಮುಖಂಡ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ವಿರೋಧಿಸಿ ಎಸ್ಸಿ, ಎಸ್‌ಟಿ, ಬುಡಕಟ್ಟು ಹಾಗೂ ಆದಿವಾಸಿ ಸಮುದಾಯಗಳು ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಅದನ್ನು ವಿಚಾರಣೆಗೆ ಪರಿಗಣಿಸಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಆದೇಶಿಸಿತು.

ಮಧ್ಯಂತರ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿ, ಅರ್ಜಿದಾರರ ಮನವಿ ಪ್ರತ್ಯೇಕ ರಾಜ್ಯದ ಬೇಡಿಕೆಯ ಸ್ವರೂಪದ್ದಾಗಿದೆ. ಮೂಲ ಅರ್ಜಿಯಲ್ಲಿನ ಬೇಡಿಕೆಗಳು ಇಡೀ ಕೊಡಗು ಜಿಲ್ಲೆಯ ಜನತೆ ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ.30ರಷ್ಟು ಇರುವ ಎಸ್‌ಸಿ-ಎಸ್‌ಟಿ, ಆದಿವಾಸಿ, ಬುಡಕಟ್ಟು, ಒಬಿಸಿ ವರ್ಗಗಳ ಬದುಕು ಮತ್ತು ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅರ್ಜಿದಾರರ ಮನವಿ ಒಂದು ಸೀಮಿತ ಜಾತಿಗೆ ಲಾಭ ಉಂಟು ಮಾಡಲಿದೆ. ಆದ್ದರಿಂದ ಅರ್ಜಿ ಸಂಬಂಧ ತಮ್ಮ ಅಹವಾಲು ಆಲಿಸಬೇಕು ಎಂದು ಕೋರಿದರು.ಅದಕ್ಕೆ ಆಕ್ಷೇಪಿಸಿದ ಅರ್ಜಿದಾರ ಸುಬ್ರಮಣಿಯನ್ ಸ್ವಾಮಿ ಖುದ್ದು ವಾದ ಮಂಡಿಸಿ, ಪ್ರತ್ಯೇಕ ರಾಜ್ಯದ ಬೇಡಿಕೆ ಖಂಡಿತ ನಮ್ಮದಲ್ಲ. ಈ ವಿಚಾರದಲ್ಲಿ ಕೊಡಗಿನವರ ಬಗ್ಗೆ ಕಪೋಲಕಲ್ಪಿತ ಸುದ್ದಿಗಳನ್ನು ಹರಿಯಬಿಡಲಾಗುತ್ತಿದೆ. ಕೊಡವರಿಗೆ ಪ್ರತ್ಯೇಕ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕವಾಗಿ ಸ್ವಯಂ ರಾಜಕೀಯ ನಿರ್ಣಯಗಳ ಹಕ್ಕು ನೀಡಬೇಕೆಂಬ ಬೇಡಿಕೆ ಪರಿಶೀಲಿಸಲು ಆಯೋಗ ರಚಿಸಬೇಕೆಂಬುದಷ್ಟೇ ನಮ್ಮ ಬೇಡಿಕೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಅಂತಿಮವಾಗಿ ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ಹೈಕೋರ್ಟ್‌, ಮೂಲ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮಧ್ಯಂತರ ಅರ್ಜಿದಾರರಿಗೆ ಮತ್ತು ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮೂಲ ಅರ್ಜಿದಾರರಿಗೆ ಸೂಚಿಸಿತು. ಈ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಜೂ.5ಕ್ಕೆ ಮುಂದೂಡಿತು.ಮೂಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಕ್ಷೇಪಿಸಿ ಕೊಡಗು ಜಿಲ್ಲೆಯ ಎಸ್‌ಸಿ-ಎಸ್‌ಟಿ, ಬುಡಕಟ್ಟು, ಆದಿವಾಸಿ, ಒಬಿಸಿ ಸಮುದಾಯಗಳನ್ನು ಪ್ರತಿನಿಧಿಸುವ ಜಿಲ್ಲೆಯ ಕೊಡವ ಬೋಣಿಪಟ್ಟ ಸಮಾಜ, ಕೂಯ್ಯುವ ಸಮಾಜ, ಅಖಿಲ ಕೊಡಗು ಪಣಿಕ ಸಮಾಜ, ಸವಿತ ಸಮಾಜ ಕೈಕೇರಿ, ಕೊಡಗು ಬಣ್ಣ ಸಮಾಜ, ಕೊಡಗು ಕೊಡವ ಮಡಿವಾಳ ಸಮಾಜ, ಕೊಲೆಯ ಸಮಾಜ, ಕೊಡಗು ಜಿಲ್ಲಾ ಕೆಂಬಟ್ಟಿ ಅಭಿವೃದ್ಧಿ ಸಮಾಜ, ಕೊಡಗು ಹೆಗ್ಗಡೆ ಸಂಘ ಮತ್ತು ಸಮಾಜ, ಕೊಡಗು ಜಿಲ್ಲಾ ಗೊಲ್ಲ ಸಮಾಜ ಸೇರಿದಂತೆ 10 ಸಂಘ-ಸಂಸ್ಥೆಗಳು ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿವೆ.