ನಗರದಲ್ಲಿ ನಡೆದಿದ್ದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣದಲ್ಲಿ ಇಬ್ಬರು ಚಾಲಕರನ್ನು ದೋಷಿಗಳೆಂದು ಘೋಷಿಸಿರುವ ನಗರದ ಜೆಎಂಎಫ್‌ಸಿ ತೃತೀಯ ಸಂಚಾರ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ನಡೆದಿದ್ದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣದಲ್ಲಿ ಇಬ್ಬರು ಚಾಲಕರನ್ನು ದೋಷಿಗಳೆಂದು ಘೋಷಿಸಿರುವ ನಗರದ ಜೆಎಂಎಫ್‌ಸಿ ತೃತೀಯ ಸಂಚಾರ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ.ಜಯನಗರ ಸಮೀಪದ ಸಿದ್ದಾಪುರದ ನಿವಾಸಿ ಆಗಿರುವ ಟೋಯಿಂಗ್ ವಾಹನದ ಚಾಲಕ ನೂರುಲ್ಲಾ ಫಯಾಜ್ ಖಾನ್ (41) ಶಿಕ್ಷೆಗೊಳಗಾದವರು.
2024ರ ಫೆಬ್ರವರಿಯಲ್ಲಿ ಯಶವಂತಪುರದ ಎಂಇಎಸ್ ರಿಂಗ್ ರಸ್ತೆಯಲ್ಲಿ ನಡೆದಿದ್ದ ಅಪಘಾತದಲ್ಲಿ ಬೈಕ್ ಸವಾರ ಟಿ.ಆರ್.ರಾಜೀವ್ (21) ಸಾವಿಗೆ ಕಾರಣವಾದ ಪ್ರಕರಣದಲ್ಲಿ 1 ವರ್ಷ 3 ತಿಂಗಳು ಜೈಲು ಶಿಕ್ಷೆ ಹಾಗೂ 6000 ರು. ದಂಡ ವಿಧಿಸಲಾಗಿದೆ.2024ರ ಫೆಬ್ರವರಿ 26 ರ ಸಂಜೆ ಎದುರಿನಿಂದ ಬಂದ ವಾಹನವು ತಗುಲಿ ದ್ವಿಚಕ್ರ ವಾಹನ ಸವಾರ ಕೆಳಗೆ ಬಿದ್ದ ವೇಳೆ ಹಿಂದೆ ಬರುತ್ತಿದ್ದ ನೂರುಲ್ಲಾ ಫಯಾಜ್ ಖಾನ್ ಚಲಾಯಿಸುತ್ತಿದ್ದ ವಾಹನ ರಾಜೀವ್ ಅವರ ಮೇಲೆ ಹರಿದ ಪರಿಣಾಮ ಅವರು ಮೃತಪಟ್ಟಿದ್ದರು. ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಸ್ಥಳದಲ್ಲಿ ಸಂಗ್ರಹಿಸಲಾದ ಖಾನ್ ಅವರ ವಾಹನದ ಹಾನಿಗೊಳಗಾದ ಭಾಗಗಳು ಸೇರಿದಂತೆ ವಿವಿಧ ಸಾಕ್ಷ್ಯಗಳು ಅವರ ಅಪರಾಧವನ್ನು ಸಾಬೀತುಪಡಿಸಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಧೀಶೆಯಾದ ಮಂಜು ಅವರು ಈ ತೀರ್ಪು ನೀಡಿದ್ದು, ಪ್ರಕರಣದ ತನಿಖಾಧಿಕಾರಿ ಬಿ.ಚಿದಾನಂದ್ ಆರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಚಂದ್ರಕಲಾ ವಾದ ಮಂಡಿಸಿದ್ದರು.11 ಸಾವಿರ ದಂಡ:
ಮತ್ತೊಂದು ಪ್ರಕರಣ 2024ರ ಜುಲೈನಲ್ಲಿ ನಡೆದಿತ್ತು. ಯಶವಂತಪುರದ ಎಚ್‌ಎಂಟಿ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ, ಬಿಎಂಟಿಸಿ ಬಸ್ ಚಾಲಕ ಪಿ.ಕೃಷ್ಣಮೂರ್ತಿ (43) ಅವರು ತಮ್ಮ ಬಸ್ ಅನ್ನು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಪ್ರಹ್ಲಾದ್ ಗಂಭೀರ ಗಾಯಗೊಂಡಿದ್ದರು.ಈ ಪ್ರಕರಣದಲ್ಲಿ ಕೃಷ್ಣಮೂರ್ತಿ ಅವರನ್ನು ದೋಷಿಯೆಂದು ಘೋಷಿಸಿದ ನ್ಯಾಯಾಲಯ 11 ಸಾವಿರ ದಂಡ ಪಾವತಿಸಬೇಕು. ದಂಡ ಪಾವತಿಸಲು ವಿಫಲವಾದರೆ 45 ದಿನಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶೆ ಮಂಜು ಅವರು ಈ ತೀರ್ಪು ನೀಡಿದ್ದರು. ಎಎಸ್‌ಐ ಹನುಮಮೂರ್ತಿ ಅವರು ತನಿಖೆ ನಡೆಸಿ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾ ಚಂದ್ರಕಲಾ ವಾದ ಮಂಡಿಸಿದ್ದರು.
