ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2015ರ ವರದಿ ಕುರಿತಂತೆ ಚರ್ಚಿಸಲು ಪ್ರತ್ಯೇಕ ವಿಧಾನಮಂಡಲ ಅಧಿವೇಶನ ಕರೆದು ಚರ್ಚಿಸುವುದು ಸೂಕ್ತ. ಈ ವರದಿ ಕುರಿತಂತೆ ಮುಕ್ತವಾಗಿ ಚರ್ಚಿಸಲು ಅವಕಾಶ ನೀಡಿದರೇ ಒಳ್ಳೆಯದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಯ ಅಂಕಿ ಸಂಖ್ಯೆ, ಅಧ್ಯಯನದ ಬಗ್ಗೆ ಅನುಮಾನ, ಆರೋಪವಿದ್ದರೇ ಸದನದಲ್ಲೇ ಚರ್ಚಿಸಲಿ. ಈ ವಿಚಾರವಾಗಿ ಒಂದು ಬಾರಿ ಸಮಗ್ರವಾಗಿ ಚರ್ಚೆಯಾದರೇ ಯಾರಿಗೂ ಅನುಮಾನ ಉಳಿಯುವುದಿಲ್ಲ. ಈ ಕುರಿತು ರಾಜ್ಯದ ಜನತೆಗೂ ಗೊತ್ತಾಗಲಿ ಎಂದು ತಿಳಿಸಿದರು.ಡಿಸಿಎಂ ಡಿ.ಕೆ.ಶಿವಕುಮಾರ ಒಕ್ಕಲಿಗ ಶಾಸಕರ ಸಭೆ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾಜದ ನಾಯಕರು. ಹೀಗಾಗಿ ಸಭೆ ನಡೆಸಿ ವರದಿ ಕುರಿತು ಚರ್ಚಿಸಿದರೇ ತಪ್ಪೇನೆಂದು ಪ್ರಶ್ನಿಸಿದರು.ಬಿಜೆಪಿ, ಜೆಡಿಎಸ್ ಜನಾಕ್ರೋಶ ಯಾತ್ರೆ ಬಗ್ಗೆ ಮಾತನಾಡಿದ ಸಚಿವರು, ಪೆಟ್ರೋಲ್, ಡಿಸೇಲ್, ಗ್ಯಾಸ್ ಸೇರಿದಂತೆ ಅನೇಕ ವಸ್ತುಗಳ ಬೆಲೆಗಳನ್ನು ಕೇಂದ್ರ ಸರ್ಕಾರವೇ ಏರಿಕೆ ಮಾಡಿದೆ. ಹೀಗಿದ್ದಾಗ ನಮ್ಮ ಸರ್ಕಾರದ ಬಗ್ಗೆ ಜನಾಕ್ರೋಶ ಯಾತ್ರೆ ಮಾಡುತ್ತಿರುವ ಬಿಜೆಪಿಯವರ ನಿಲುವು ಎಷ್ಟರ ಮಟ್ಟಿಗೆ ಸರಿ? ಬಿಜೆಪಿಯವರು ಧರಣಿ ಮಾಡುವುದಿದ್ದರೆ ಕೇಂದ್ರ ಸರ್ಕಾರದ ವಿರುದ್ಧವೂ ಪ್ರತಿಭಟಿಸಲಿ ಎಂದು ವ್ಯಂಗ್ಯವಾಡಿದರು. ಎಲಿವೇಟೆಡ್ ಕಾರಿಡಾರ್, ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ, ನೀರಾವರಿ ಸಮಸ್ಯೆಗಳು, ಹಿಡಕಲ್ ಡ್ಯಾಮ್‌ನಲ್ಲಿ ಕುಡಿಯುವ ನೀರು ಸಂಗ್ರಹಣೆ, ಅರಣ್ಯ ಇಲಾಖೆಯ ಕೆಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾಗಿ ತಿಳಿಸಿದ ಸಚಿವರು, ಕುಡಿಯುವ ನೀರಿಗಾಗಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಬಗ್ಗೆ ಶೀಘ್ರವೇ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.