ಕರಾವಳಿಗೆ ಪ್ರತ್ಯೇಕ ಟೂರಿಸಂ ನೀತಿ: ಡಾ.ಕೆ.ವಿ. ರಾಜೇಂದ್ರ

| Published : Oct 24 2024, 12:37 AM IST / Updated: Oct 24 2024, 12:38 AM IST

ಕರಾವಳಿಗೆ ಪ್ರತ್ಯೇಕ ಟೂರಿಸಂ ನೀತಿ: ಡಾ.ಕೆ.ವಿ. ರಾಜೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕಡಲ ತೀರಗಳಲ್ಲಿ ಗೋವಾ ಮಾದರಿಯಲ್ಲಿ ಅಂಗಡಿಗಳು ಮತ್ತು ಮದ್ಯವನ್ನು ಅನುಮತಿಸಲು ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ. ನೂತನ ಪ್ರವಾಸೋದ್ಯಮ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಅಳವಡಿಸಲಾಗುವುದು ಎಂದು ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ನೂತನ ನೀತಿ ರೂಪಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅದರಲ್ಲಿ ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ನೀತಿ ಅಳವಡಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಎಂಡಿ ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಟೂರಿಸಂ ಸೊಸೈಟಿ ವತಿಯಿಂದ ನಗರದಲ್ಲಿ ಬುಧವಾರ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಟ್ರಾವೆಲ್‌, ಟೂರಿಸಂ, ಹಾಸ್ಪಿಟಾಲಿಟಿ ಮಧ್ಯಸ್ಥಗಾರರ ಜತೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದ್ದರೂ ಅದನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಆಗಿಲ್ಲ. ಕರಾವಳಿಗೆ ಪ್ರವಾಸಕ್ಕೆ ಬರುವವರು ಇಲ್ಲಿಂದ ಕೇರಳ ಅಥವಾ ಮಡಿಕೇರಿ ಮತ್ತಿತರ ಕಡೆಗೆ ತೆರಳುತ್ತಾರೆ. ಕೇವಲ ಕರಾವಳಿಯ ತಾಣಗಳನ್ನೇ ಪ್ರವಾಸದ ಗುರಿಯಾಗಿ (ಟೂರಿಸಂ ಡೆಸ್ಟಿನೇಶನ್‌) ಮಾಡಿಕೊಳ್ಳಲು ಸಾಧ್ಯವಾಗುವಂತೆ ರೂಪಿಸಬೇಕಿದೆ. ಅದಕ್ಕಾಗಿ ಕರಾವಳಿ ಟೂರಿಸಂಗೆ ಪ್ರತ್ಯೇಕ ನೀತಿ ರೂಪಿಸಲು ಅಗತ್ಯ ಸಲಹೆಗಳನ್ನು ಕಲೆಹಾಕಲಾಗುತ್ತಿದೆ ಎಂದರು.

ಸಿಆರ್‌ಝಡ್‌ ಕ್ಲಿಯರೆನ್ಸ್‌ಗೆ ಕೇಂದ್ರ: ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಿಆರ್‌ಝಡ್‌ ಕ್ಲಿಯರೆನ್ಸ್‌ ಪಡೆಯಲು ನೂತನ ನೀತಿಯಲ್ಲಿ ಅವಕಾಶವಿದ್ದು, ಅದಕ್ಕಾಗಿ ಫೆಸಿಲಿಟೇಶನ್‌ ಸೆಂಟರ್‌ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಕಡಲ ತೀರ ಮ್ಯಾಪಿಂಗ್‌: ದಕ್ಷಿಣ ಕನ್ನಡದ ಬಟ್ಟಪಾಡಿಯಿಂದ ಸಸಿಹಿತ್ಲುವರೆಗಿನ ಕಡಲತೀರದ ಪ್ರದೇಶವನ್ನು ಮ್ಯಾಪಿಂಗ್ ಮಾಡಲು ಪ್ರವಾಸೋದ್ಯಮ ಇಲಾಖೆಯು ದ.ಕ. ಜಿಲ್ಲಾಡಳಿತವನ್ನು ಕೋರಿದ್ದು, ಈ ತೀರದುದ್ದಕ್ಕೂ ಪ್ರವಾಸೋದ್ಯಮ ಉತ್ತೇಜಿಸಲು ಲಭ್ಯವಿರುವ ಸರ್ಕಾರಿ ಮತ್ತು ಖಾಸಗಿ ಜಾಗಗಳನ್ನು ಗುರುತಿಸಲು ತಿಳಿಸಲಾಗಿದೆ. ಇಲ್ಲಿ ಅನುಮತಿಸುವ ಟೂರಿಸಂ ಚಟುವಟಿಕೆ ನಡೆಸಲು ಬೇಕಾದ ಕ್ಲಿಯರೆನ್ಸ್‌ನ್ನು ರಾಜ್ಯ ಮಟ್ಟದಲ್ಲಿ ನೀಡಲಾಗುತ್ತದೆ ಎಂದು ಕೆ.ವಿ. ರಾಜೇಂದ್ರ ತಿಳಿಸಿದರು.

ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ ಕಾರ್ಯಕ್ರಮ ಆಧಾರಿತ ಟೂರಿಸಂ ಮಾಡಲು ಆರಂಭಿಸಲಾಗಿದೆ. ಎಲ್ಲ ಕೋನಗಳಿಂದ ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕಾದರೆ ಖಾಸಗಿ ಹೂಡಿಕೆ ಜಾಸ್ತಿ ಆಗಬೇಕಿದೆ. ಅಡ್ವೆಂಚರ್‌ ಟೂರಿಸಂಗೆ ಸಾಕಷ್ಟು ಅವಕಾಶವಿದೆ. ಈ ನಿಟ್ಟಿನಲ್ಲಿ ಕೆಲವೇ ತಿಂಗಳುಗಳಲ್ಲಿ ಕರಾವಳಿ ಹೂಡಿಕೆದಾರರ ಸಮಾವೇಶ ಆಯೋಜಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಉಡುಪಿಯಲ್ಲಿ 85 ಹೆಚ್ಚುವರಿ ತಾಣ: ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 35 ಪ್ರವಾಸಿ ತಾಣಗಳಿವೆ. ಹೆಚ್ಚುವರಿಯಾಗಿ 85 ತಾಣಗಳನ್ನು ಗುರುತಿಸಲಾಗಿದ್ದು, ಇವುಗಳ ಪರಿಚಯವುಳ್ಳ ಕಾಫಿ ಟೇಬಲ್‌ ಬುಕ್‌ ತರಲು ಸಿದ್ಧತೆ ನಡೆದಿದೆ. ಮುಖ್ಯವಾಗಿ ಈ ತಾಣಗಳಿಗೆ ತೆರಳುವ ರಸ್ತೆ ಅಗಲ ಕಿರಿದಾಗಿದ್ದು, ತೀರ ಹದಗೆಟ್ಟಿವೆ. ಅಲ್ಲದೆ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳೂ ಇಲ್ಲ. ಈ ತಾಣಗಳ ಪ್ರಾಕೃತಿಕ ಸೌಂದರ್ಯವನ್ನು ಉಳಿಸಿಕೊಂಡು ಕಡಿಮೆ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದರೆ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ 18 ಕಡಲ ತೀರಗಳಿವೆ. ಇಲ್ಲಿ ವಿಶ್ರಾಂತಿ ಕೊಠಡಿಗಳನ್ನು ಅಭಿವೃದ್ಧಿಪಡಿಸಲು ಗಮನ ಹರಿಸಬೇಕು ಎಂದ ವಿದ್ಯಾಕುಮಾರಿ, ಜಿಲ್ಲೆಯಲ್ಲಿ ಕೃಷಿ, ಸಾಹಸ ಪ್ರವಾಸೋದ್ಯಮವಿದೆ. ಈಗ ಕಂಬಳ, ಭೂತಾರಾಧನೆ, ಜಾನಪದ ಪ್ರವಾಸೋದ್ಯಮದತ್ತ ಗಮನ ಹರಿಸಬೇಕಿದೆ. ಅಲ್ಲದೆ ಮಳೆಗಾಲದ ಪ್ರವಾಸೋದ್ಯಮವನ್ನೂ ಉತ್ತೇಜಿಸಬಹುದು ಎಂದು ಸಲಹೆ ನೀಡಿದರು.

ಜಿಎಸ್‌ಟಿ ಹೊರೆ: ಕರ್ನಾಟಕ ಟೂರಿಸಂ ಸೊಸೈಟಿಯ ಕಾರ್ಯಕಾರಿ ಸದಸ್ಯ ಪಿ.ಸಿ. ರಾವ್ ಮಾತನಾಡಿ, ಮುಂಚೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವ ರೆಸ್ಟೋರೆಂಟ್‌ಗಳು ಜಿಎಸ್‌ಟಿ ಪಾವತಿಸಬೇಕಿರಲಿಲ್ಲ. ಆದರೆ ಈಗ ಪಾವತಿಸಬೇಕಿರುವುದರಿಂದ ಹೊಟೇಲ್ ಮಾಲೀಕರಿಗೆ ಹೊರೆಯಾಗಿದೆ. ಬಾರ್‌ ಆಂಡ್‌ ರೆಸ್ಟೋರೆಂಟ್‌ಗಳಿಗೆ ಅಬಕಾರಿ ಇಲಾಖೆಯ ಕಿರುಕುಳ ಹೆಚ್ಚಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕಿದೆ ಎಂದು ಹೇಳಿದರು.

ದ.ಕ. ಜಿಪಂ ಸಿಇಒ ಡಾ.ಆನಂದ್‌, ದ.ಕ. ಹೊಟೇಲ್‌ ಎಸೋಸಿಯೇಶನ್‌ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಉಡುಪಿ ಹೊಟೇಲ್‌ ಎಸೋಸಿಯೇಶನ್‌ ಅಧ್ಯಕ್ಷ ಮನೋಹರ ಶೆಟ್ಟಿ, ಕರ್ನಾಟಕ ಟೂರಿಸಂ ಸೊಸೈಟಿ ಕಾರ್ಯಕಾರಿ ಸದಸ್ಯ ಅಯ್ಯಪ್ಪ ಸೋಮಯ್ಯ ಮತ್ತಿತರರು ಇದ್ದರು.

ರಾಜ್ಯದ ಬೀಚ್‌ಗಳಲ್ಲಿ ಮದ್ಯ ಅನುಮತಿಗೆ ಚಿಂತನೆ

ರಾಜ್ಯದ ಕಡಲ ತೀರಗಳಲ್ಲಿ ಗೋವಾ ಮಾದರಿಯಲ್ಲಿ ಅಂಗಡಿಗಳು ಮತ್ತು ಮದ್ಯವನ್ನು ಅನುಮತಿಸಲು ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ. ನೂತನ ಪ್ರವಾಸೋದ್ಯಮ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಅಳವಡಿಸಲಾಗುವುದು ಎಂದು ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ಬೀಚ್‌ಗಳಲ್ಲಿ ಸಮಯ ಪಾಲನೆ ಮತ್ತು ಮದ್ಯ ಬಳಕೆಗೆ ಸಂಬಂಧಿಸಿದಂತೆ ಕೆಲವು ನಿರ್ಬಂಧಗಳನ್ನು ಸಡಿಲಿಸುವ ಅಗತ್ಯತೆಯ ಕುರಿತು ಮಧ್ಯಸ್ಥಗಾರರ ಮನವಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಕಡಲ ತೀರಗಳು ಗೋವಾದಂತೆ ಹೆಚ್ಚು ಜನರನ್ನು ಆಕರ್ಷಿಸಬೇಕಾಗಿದೆ. ಜನರು ರಾತ್ರಿಯಲ್ಲಿ ಸಮಯ ಕಳೆಯಲು ಸುರಕ್ಷತೆಗಾಗಿ ಬೀಚ್‌ಗಳಲ್ಲಿ ಹೆಚ್ಚಿನ ಬೀದಿ ದೀಪಗಳನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಟೆಂಟ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಪ್ರವಾಸೋದ್ಯಮ ಸಾಮರ್ಥ್ಯವಿರುವ ಸರ್ಕಾರಿ ಮತ್ತು ಖಾಸಗಿ ಜಮೀನುಗಳನ್ನು ಹುಡುಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.