ಸೆ.15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

| Published : Sep 01 2024, 01:49 AM IST

ಸೆ.15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
Share this Article
  • FB
  • TW
  • Linkdin
  • Email

ಸಾರಾಂಶ

September 15 is International Democracy Day

- ಬೃಹತ್ ಮಾನವ ಸರಪಳಿ ನಿರ್ಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ: ಡಾ. ಸುಶೀಲಾ

-------

ಕನ್ನಡಪ್ರಭ ವಾರ್ತೆ ಯಾದಗಿರಿ

ಸೆ.15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಅರ್ಥಪೂರ್ಣವಾಗಿ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಯರಗೋಳ ಗ್ರಾಮದಿಂದ ಕಡೇಚೂರ ಗ್ರಾಮದ ಗಡಿಯವರೆಗೆ ಬರುವಂತಹ 27 ಜನ ವಸತಿ ಸ್ಥಳಗಳಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ಅಧಿಕಾರಿಗಳೊಂದಿಗೆ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಬೀದರ್‌ನಿಂದ ಚಾಮರಾಜನಗರದವರೆಗೆ ಬೃಹತ್ ಮಾನವ ಸರಪಳಿ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ದಾರಿಯುದ್ದಕ್ಕೂ ಪಸರಿಸುವ ಉದ್ದೇಶ ಹೊಂದಿದ್ದು, ಜಿಲ್ಲೆಯ ಜನತೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ಸಂವಿಧಾನದ ಗೌರವ, ಘನತೆ ಹೆಚ್ಚಿಸುವ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾರಿ ಹೇಳುವಂತಹ ಮಾನವ ಸರಪಳಿ ರಚಿಸಿ ಯಶಸ್ವಿಯಾಗಿ, ಯಾವುದೇ ಲೋಪ ಆಗದಂತೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಈ ಕಾರ್ಯಕ್ರಮದ ಯಶಸ್ವಿಗಾಗಿ 20 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಪ್ರತಿ 1 ಕಿಲೋ ಮೀಟರ್ ವ್ಯಾಪ್ತಿಗೆ ಏರಿಯಾ ಅಧಿಕಾರಿಗಳು ಮತ್ತು ಪ್ರತಿ 3 ಕಿಲೋಮೀಟರ್ ವ್ಯಾಪ್ತಿಗೆ ತಾಲೂಕ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗುತ್ತದೆ ಎಂದರು.

ಕಾರ್ಯಕ್ರಮಕ್ಕೆ ಅತಿಥಿ ಗಣ್ಯರನ್ನು ಆಹ್ವಾನಿಸಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ದೇಶಭಕ್ತಿ, ಐಕ್ಯತೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವ ಸಾರುವಂತಹ ಮಾನವ ಸರಪಳಿ ನಿರ್ಮಿಸಬೇಕು. ವಿವಿಧ ಸಾಂಸ್ಕೃತಿಕ, ಕಲಾ ತಂಡಗಳ, ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ತುರ್ತು ಸೇವೆಗಾಗಿ ಆರೋಗ್ಯಯಿಂದ ನುರಿತ ಸಿಬ್ಬಂದಿಯೊಂದಿಗೆ ಚಿಕಿತ್ಸೆ ಸೌಲಭ್ಯ ಇರುವ ಆ್ಯಂಬೂಲೆನ್ಸ್‌ ವ್ಯವಸ್ಥೆ, ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋ ಬಸ್ತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾತಂಡಗಳ ನಿಯೋಜಿಸುವಂತೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಯರಗೋಳ ತಾಂಡ, ಮಲ್ಕಪನಳ್ಳಿ, ಗೇಮುನಾಯಕ ತಾಂಡ, ವೆಂಕಟೇಶ ನಗರ, ಅಲ್ಲಿಪೂರ ತಾಂಡ, ಅಲ್ಲಿಪೂರ, ಕಂಚಗಾರಹಳ್ಳಿ, ಚಾಮನಳ್ಳಿ ತಾಂಡ, ಆರ್ಯಭಟ ಸ್ಕೂಲ್, ಆದರ್ಶ ಸ್ಕೂಲ್, ಮೆಡಿಕಲ್ ಕಾಲೇಜು, ಮುದ್ನಾಳ ದೊಡ್ಡತಾಂಡ, ಮುಂಡರಗಿ, ಆಶನಾಳ ತಾಂಡ, ರಾಮಸಮುದ್ರ, ಮೈಲಾಪೂರ, ಹಳಿಗೇರಾ, ಆರ್ ಹೊಸಳ್ಳಿ, ನಗಲಾಪೂರ, ಬಳಿಚಕ್ರ, ಕಿಲ್ಲನಕೇರಾ, ಕರಿಬೆಟ್ಟ, ರಾಚನಳ್ಳಿ, ಶೆಟ್ಟಿಹಳ್ಳಿ, ಕಡೆಚೂರ, ಕಡೆಚೂರ ಬಾರ್ಡರ್ ಒಟ್ಟು 68 ಕಿಲೋಮೀಟರ್ ಮಾನವ ಸರಪಳಿ ಮಾಡಬೇಕೆಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಎಸ್‌.ಪಿ., ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಡಿವೈಎಸ್ಪಿ ಅರುಣಕುಮಾರ , ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕುಮಾರಿ ಸರೋಜಾ, ಡಿಡಿಪಿಐ ಮಂಜುನಾಥ, ಡಿಡಿಪಿಯು ಚನ್ನಬಸಪ್ಪ ಕುಳಗೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ತಹಸೀಲ್ದಾರ್ ಸುರೇಶ ಅಂಕಲಗಿ ಇದ್ದರು.

-----

ಫೋಟೋ: 29ವೈಡಿಆರ್10: ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಯಿತು.