ಸೂಲೇನಹಳ್ಳಿಯಲ್ಲಿ ಚರಂಡಿ ನೀರು ವಿಸರ್ಜನೆಗೆ ಸೆಪ್ಟಿಕ್ ಟ್ಯಾಂಕ್

| Published : Jul 09 2025, 12:18 AM IST

ಸೂಲೇನಹಳ್ಳಿಯಲ್ಲಿ ಚರಂಡಿ ನೀರು ವಿಸರ್ಜನೆಗೆ ಸೆಪ್ಟಿಕ್ ಟ್ಯಾಂಕ್
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ವ್ಯಾಪ್ತಿಯ ಕೂಗಳತೆ ದೂರದಲ್ಲಿರುವ ಹಾನಗಲ್ ಗ್ರಾಮ ಪಂಚಾಯಿತಿಗೆ ಸೇರಿದ ಸೂಲೇನಹಳ್ಳಿ ಗ್ರಾಮದಲ್ಲಿ ರಾಜ ಕಾಲುವೆ ಇಲ್ಲದೆ ಚರಂಡಿ ನೀರು ಸರಾಗವಾಗಿ ಹರಿಯದೆ ಕೊಳಚೆ ನೀರು ನಿಂತಲ್ಲೇ ನಿಂತು ಇಡೀ ಗ್ರಾಮ ಅಕ್ಷರಶಃ ಕೊಚ್ಚೆ ಗುಂಡಿಯಂತಾಗಿದೆ. ಗ್ರಾಮದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ.

ಬಿಜಿಕೆರೆ ಬಸವರಾಜ

ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು

ಈ ಗ್ರಾಮದಲ್ಲಿ ಚರಂಡಿ ನೀರು ಹೊರ ಹಾಕಲು ಸೆಪ್ಟಿಕ್ ಟ್ಯಾಂಕ್ ಅನಿವಾರ್ಯವಾಗಿದೆ. ಪಟ್ಟಣ ವ್ಯಾಪ್ತಿಯ ಕೂಗಳತೆ ದೂರದಲ್ಲಿರುವ ಹಾನಗಲ್ ಗ್ರಾಮ ಪಂಚಾಯಿತಿಗೆ ಸೇರಿದ ಸೂಲೇನಹಳ್ಳಿ ಗ್ರಾಮದಲ್ಲಿ ರಾಜ ಕಾಲುವೆ ಇಲ್ಲದೆ ಚರಂಡಿ ನೀರು ಸರಾಗವಾಗಿ ಹರಿಯದೆ ಕೊಳಚೆ ನೀರು ನಿಂತಲ್ಲೇ ನಿಂತು ಇಡೀ ಗ್ರಾಮ ಅಕ್ಷರಶಃ ಕೊಚ್ಚೆ ಗುಂಡಿಯಂತಾಗಿದೆ. ಗ್ರಾಮದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ. ಕೊಚ್ಚೆ ನೀರು ಹೊರ ಹಾಕುವುದು ಪಂಚಾಯಿತಿಯವರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಪರಿಣಾಮವಾಗಿ ಸೆಪ್ಟಿಕ್ ಟ್ಯಾಂಕ್ ಅನ್ನು ಬಳಸಿಕೊಂಡು ಕೊಚ್ಚೆ ನೀರು ವಿಲೇವಾರಿ ಮಾಡಲಾಗುತ್ತಿದೆ.

ಈ ಹಿಂದೆ ಗ್ರಾಮದಲ್ಲಿ ನೈಸರ್ಗಿಕವಾಗಿ ಹರಿಯುತ್ತಿದ್ದ ಚರಂಡಿ ನೀರಿನ ಹರಿಯುವಿಕೆಯನ್ನು ತಡೆದಿರುವ ರೈತರೊಬ್ಬರು ಜಮೀನು ತಮ್ಮದೆಂದು ಚರಂಡಿ ನಿರ್ಮಾಣಕ್ಕೆ ಅಡ್ಡಿ ಪಡಿಸಿರುವ ಪರಿಣಾಮ ಊರಿನ ನೀರು ಹೊರ ಹೋಗದೆ ನಿಂತಲ್ಲೇ ನಿಂತಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ಪ್ರಸ್ತುತ ಕಳೆದ ಐದಾರು ತಿಂಗಳಿಂದ ಸೆಪ್ಟಿಕ್ ಟ್ಯಾಂಕ್ ಸಹಾಯದಿಂದ ವಾರಕ್ಕೊಮ್ಮೆ ಸೆಪ್ಟಿಕ್ ಟ್ಯಾಂಕ್ ಮೂಲಕ ಚರಂಡಿ ನೀರು ಹೊರ ಹಾಕಲಾಗುತ್ತದೆ. ವಾರಕ್ಕೊಮ್ಮೆ 15ಕ್ಕೂ ಹೆಚ್ಚಿನ ಟ್ಯಾಂಕ್ ಚರಂಡಿ ನೀರನ್ನು ವಿಲೇವಾರಿ ಮಾಡಲಾಗುತ್ತಿದೆ.

ಪ್ರತಿ ವಾರ 8 ರಿಂದ 10 ಸಾವಿರ ರು. ಹಣ ಖರ್ಚು ಬರುತ್ತಿದೆ ಎನ್ನುವುದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರಿಬಸಪ್ಪ ಅಭಿಪ್ರಾಯವಾಗಿದೆ.

ಮೊದಲು ಆಂಧ್ರ ಪ್ರದೇಶದ ರಾಯದುರ್ಗ ಖಾಸಗಿಯವರಿಗೆ ಪ್ರತಿ ವಾರ 30 ಸಾವಿರ ನೀಡಿ ನೀರು ಹೊರ ಹಾಕಲಾಗುತ್ತಿತ್ತು. ಪ್ರತಿ ವಾರ ಇಷ್ಟೊಂದು ಹಣ ವ್ಯಯ ಮಾಡಲಾಗದ ಪಂಚಾಯಿತಿ ಅಧಿಕಾರಿಗಳು ಪ್ರಸ್ತುತ ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯ ಸೆಪ್ಟಿಕ್ ಟ್ಯಾಂಕ್‌ನ ಸಹಾಯ ಪಡೆದಿದ್ದಾರೆ. ಐದು ಸಾವಿರ ಲೀಟರ್ ಸಾಮರ್ಥ್ಯದ ಸೆಪ್ಟಿಕ್ ಟ್ಯಾಂಕ್‌ನಿಂದ ಪ್ರತಿ ವಾರ 75 ಸಾವಿರಕ್ಕೂ ಹೆಚ್ಚು ಕೊಚ್ಚೆ ನೂರು ತೆರವು ಮಾಡಲಾಗುತ್ತಿದೆ.

ಚರಂಡಿ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತಿದೆ. ಎಲ್ಲಿ ನೋಡಿದರೂ ಪಾಚಿ ಕಟ್ಟಿರುವ ನೀರು ಆವರಿಸಿಕೊಂಡು ಇಡೀ ಗ್ರಾಮ ಕೊಚ್ಚೆ ಗುಂಡಿಯಂತಾಗಿದೆ. ಗ್ರಾಮದ ಹೆಬ್ಬಾಗಿಲಲ್ಲಿಯೇ ನಿಂತಿರುವ ಕೊಚ್ಚೆ ನೀರು ದುರ್ವಾಸನೆ ಬಿರುತ್ತ ಸಾರ್ವಜನಿಕರಿಗೆ ಸ್ವಾಗತ ಕೋರುವಂತಾಗಿದೆ. ಚರಂಡಿ ನಿರ್ಮಿಸಬೇಕೆನ್ನುವ ಸಾರ್ವಜನಿಕರ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಾಗಿದೆ.

ಚರಂಡಿ ಬಂದ್ ಮಾಡಿರುವ ಪರಿಣಾಮ ಗ್ರಾಮದಲ್ಲಿ ಸಮಸ್ಯೆ ಬಿಗಡಾಯಿಸಿದೆ. ಬಳಸಿದ ನೀರು ಹರಿಯದೇ ಅಲ್ಲಿನ ಚರಂಡಿಗಳೆಲ್ಲಾ ತುಂಬಿ ತುಳುಕುತ್ತಿವೆ. ಮನೆಗಳ ಬಾಗಿಲವರೆಗೆ ಗಲೀಜು ನೀರು ನಿಂತಿದ್ದು ಸೊಳ್ಳೆಗಳ ಆವಾಸಸ್ಥಾನವಾಗಿದೆ. ನಿವಾಸಿಗಳಿಗೆ ಸಾಂಕ್ರಾಮಿಕ ಖಾಯಿಲೆಗಳ ಭೀತಿ ಎದುರಾಗಿದ್ದರೂ ಅಧಿಕಾರಿಗಳು ಜಮೀನು ವಶಕ್ಕೆ ಪಡೆದು ರಾಜಕಾಲುವೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಇನ್ನಾದರೂ ಅಧಿಕಾರಿಗಳು ಗ್ರಾಮದಲ್ಲಿ ಎದುರಾಗಿರುವ ಜಮೀನು ಸಮಸ್ಯೆ ನಿವಾರಿಸುವ ಮೂಲಕ ಕಾಲುವೆ ನಿರ್ಮಿಸಲು ಮುಂದಾಗಬೇಕಿದೆ.

ಗ್ರಾಮದಲ್ಲಿ ಚರಂಡಿ ನೀರು ಹರಿಯುವ ಜಮೀನು ತಮ್ಮದೆಂದು ರೈತರೊಬ್ಬರು ಕಾಮಗಾರಿ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿರುವ ಪರಿಣಾಮ ಕಳೆದೊಂದು ವರ್ಷದಿಂದ ಸಮಸ್ಯೆ ಎದುರಾಗಿದೆ. ಇನ್ನೆರಡು ದಿನದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರಂಡಿ ನಿರ್ಮಾಣಕ್ಕೆ ಕ್ರಮ ವಹಿಸುತ್ತೇನೆ.

ಹನುಮಂತಪ್ಪ.ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ. ಮೊಳಕಾಲ್ಮುರು.

ಚರಂಡಿ ಇಲ್ಲದೆ ಗ್ರಾಮದಲ್ಲಿ ನೀರು ಹರಿಯುತ್ತಿಲ್ಲ.ಕಳೆದೊಂದು ವರ್ಷದಿಂದ ಸಮಸ್ಯೆ ತಲೆ ದೂರಿದೆ ಈಗ ಇನ್ನಷ್ಟು ಸಮಸ್ಯೆ ಬಿಗಡಾಯಿಸಿದೆ. ಅಲ್ಲಿನ ರೈತರಿಗೆ ಮನವೊಲಿಸಿದ್ದರೂ ಪ್ರಯೋಜನವಾಗಿಲ್ಲ. ಇನ್ನೆರಡು ತಿಂಗಳಲ್ಲಿ ಚರಂಡಿ ನಿರ್ಮಿಸಲು ಕ್ರಮ ವಹಿಸುತ್ತೇವೆ.

ಸ್ವಪ್ನ ಶ್ರೀನಿವಾಸ್. ಅಧ್ಯಕ್ಷೆ, ಹಾನಗಲ್ ಗ್ರಾಮ ಪಂಚಾಯಿತಿ.