ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಜೀವನದಲ್ಲಿ ನೆಮ್ಮದಿ ಲಭಿಸಬೇಕಾದರೆ ದಾನ ಹಾಗೂ ಧ್ಯಾನದ ಅಗತ್ಯವಿದೆ ಎಂದು ಗಾವಡಗೆರೆ ಗುರುಲಿಂಗಜಂಗಮದೇವರ ಮಠದ ನಟರಾಜ ಸ್ವಾಮೀಜಿಗಳು ಹೇಳಿದರು.ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ೧೦೯ನೇ ಜಯಂತಿ ಮಹೋತ್ಸವ ಉದ್ದೇಶಿಸಿ ಆಶೀರ್ವಚನ ನೀಡಿ, ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಹಾಗೂ ಡಾ. ಶ್ರೀ ಶಿವಕುಮಾರಸ್ವಾಮಿಗಳು ಬಡಮಕ್ಕಳ ಪಾಲಿನ ದೇವರು. ವಿವೇಕಾನಂದರು ೧೯ನೇ ಶತಮಾನದಲ್ಲಿ ತಮ್ಮ ವಿಚಾರಧಾರೆಗಳ ಮೂಲಕ ದೇಶದ ಘನತೆಯನ್ನು ಹೆಚ್ಚಿಸಿದರು. ಸುತ್ತೂರು ರಾಜೇಂದ್ರ ಸ್ವಾಮೀಜಿಗಳು ವಿದೇಶಗಳಲ್ಲಿ ತಮ್ಮ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ನಮ್ಮ ದೇಶದ ಪರಂಪರೆ ಸಂಸ್ಕೃತಿಯನ್ನು ಸಾರುತ್ತಿದ್ದಾರೆ. ವಿದ್ಯೆಯೊಂದಿಗೆ ಹೇಗೆ ಬದುಕಬೇಕು ಎಂಬ ಪರಿಕಲ್ಪನೆಯನ್ನು ಮಠಗಳು ಕಟ್ಟಿಕೊಟ್ಟಿವೆ. ಇದರಿಂದಾಗಿಯೇ ಮಠದಲ್ಲಿ ಶಿಕ್ಷಣ ಪೂರೈಸಿದ ವ್ಯಕ್ತಿಗಳು ಉತ್ತಮ ನಾಗರಿಕರಾಗಿ ಜೀವನ ನಡೆಸುತ್ತಾರೆ. ಶಿಕ್ಷಣಕ್ಕೆ ಸಂಸ್ಕಾರ ಬೇಕು ಎಂದರೆ ಹೃದಯವಂತಿಕೆ ಬೇಕು. ಇಂದಿನ ಶಿಕ್ಷಣದಲ್ಲಿ ಮನುಷ್ಯತ್ವವೆ ಮಾಯವಾಗಿದೆ. ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಮಾನವೀಯ ಶಿಕ್ಷಣದ ಅಗತ್ಯವಿದೆ ಆದ್ದರಿಂದ ಶ್ರೀಗಳ ಹಾಕಿಕೊಟ್ಟ ಮಾರ್ಗದಲ್ಲಿ ಬದುಕಿ ಸದ್ಗತಿ ಪಡೆಯಬೇಕು ಎಂದರು.
ಕಲ್ಲಮಠದ ಶ್ರೀ ಮಹಾಂತಸ್ವಾಮೀಜಿಗಳು ಮಾತನಾಡಿ, ತ್ಯಾಗ ಮತ್ತು ಸೇವೆಯ ಪ್ರತೀಕ ಸುತ್ತೂರು ಮಠ. ರಾಜ್ಯದ ಎರಡು ಕಣ್ಣುಗಳು ಸುತ್ತೂರು ಹಾಗೂ ಸಿದ್ದಗಂಗಾಮಠ. ಸಮಾಜ ತಿದ್ದುವಂತ ವಚನಗಳಿಗೆ ಕಾಲಮಾನವಿಲ್ಲ ಗುರುಪರಂಪರೆಯಲ್ಲಿ ವಿದ್ಯೆ ಕಲಿಯುವ ಅವಕಾಶ ದೊರೆತವರೆ ಪುಣ್ಯವಂತರು. ಸಂಸ್ಕಾರ ಕಲಿತವರಿಂದ ಸಮಾಜಕ್ಕೆ ಯಾವುದೆ ಕೆಡಕಾಗುವುದಿಲ್ಲ. ಸ್ವಂತಕ್ಕೆ ಬದುಕುವವರು ಸ್ವಾರ್ಥಿಗಳು ಸಮಾಜಕ್ಕಾಗಿ ಬದುಕುವವರು ಅಮರರು. ಸರಳವಾಗಿ ಬದುಕುವುದರಿಂದ ಸಾಧನೆ ಮಾಡಬಹುದು ಎಂದರು.ಕಿರಿಕೊಡ್ಲಿಮಠದ ಶ್ರೀ ಸದಾಶಿವಸ್ವಾಮೀಜಿ ಮಾತನಾಡಿ, ಸಮಾಜಮುಖಿಯಾಗಿ ಕೆಲಸ ಮಾಡುವವರ ನೆನಪು ಅವರ ಕಾಲಮಾನದ ನಂತರವು ಇರಲಿದೆ. ಇಂತಹವರ ಪಾಲಿಗೆ ಸೇರಿದವರು ಸುತ್ತೂರು ಶ್ರೀಗಳು. ಸಮಾಜದ ಬೆಳಕಾಗಿ ಸಿದ್ದಗಂಗೆ ಹಾಗೂ ಸುತ್ತೂರು ಶ್ರೀಗಳು ಕೆಲಸ ಮಾಡಿದ್ದಾರೆ. ಮಠದಲ್ಲಿ ಶಿಕ್ಷಣ ಪಡೆದ ಸಾಕಷ್ಟು ಜನರು ರಾಜ್ಯದ ಉನ್ನತ ಸ್ಥಾನ ಅಲಂಕರಿಸಿದ್ದಾರೆ ಎಂದರು. ಸರ್ಕಾರಕ್ಕೆ ಮಾದರಿಯಾದ ಕೆಲಸವನ್ನು ಮಠಗಳು ಮಾಡಿವೆ ಎಂದರು. ಶಾಸಕ ಸಿಮೆಂಟ್ ಮಂಜು ಮಾತನಾಡಿ, ವೀರಶೈವ ಮಠಗಳು ಲಕ್ಷಾಂತರ ಬಡಮಕ್ಕಳಿಗೆ ದಾರಿ ದೀಪವಾಗಿವೆ. ಬಡವರಿಗೆ ವಿದ್ಯೆ ಎಂಬುದು ಗಗನ ಕುಸುಮವಾಗಿದ್ದ ವೇಳೆ ಭಿಕ್ಷೆ ಬೇಡಿ ಬಡಮಕ್ಕಳಿಗೆ ಅನ್ನಧಾನ ವಿದ್ಯೆ ದಾನ ಮಾಡಿದ ಮಹಾಪುರಷರು ಸುತ್ತೂರು ಹಾಗೂ ಸಿದ್ದಗಂಗಾ ಮಠದ ಶ್ರೀಗಳು. ಇಂತಹ ಮಠಮಾನ್ಯಗಳು ರಾಜ್ಯದಲ್ಲಿ ಇಲ್ಲದಿದ್ದರೆ ಶೇ. ೫೦ರಷ್ಟು ಜನರು ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗುತಿರಲಿಲ್ಲ. ಸಂಸ್ಕಾರ, ಸಂಸ್ಕೃತಿಯನ್ನು ಬಿತ್ತರಿಸುತ್ತ ಧರ್ಮವನ್ನು ಸದಾ ಎಚ್ಚರದಲ್ಲಿಡುವಂತಹ ಸುತ್ತೂರು ಮಠದ ಸಂಖ್ಯೆ ಸಾವಿರವಾಗಲಿ. ಎಂದಿಗೂ ಹಿಂದೂ ಧರ್ಮ ಮತ್ತೊಂದು ಧರ್ಮದ ಮೇಲೆ ದಬ್ಬಾಳಿಕೆ ಮಾಡಿಲ್ಲ, ಇಂತಹ ಧರ್ಮದಲ್ಲಿ ಹುಟ್ಟಿದ ನಾವೇ ಪುಣ್ಯವಂತರು ಎಂದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಜಯಂತಿ ಅಂಗವಾಗಿ ಹಣ್ಣು ಹಂಪಲು ವಿತರಿಸಲಾಯಿತು. ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಕಾರ್ಯಕ್ರಮದ ವೇದಿಕೆಯವರಗೆ ಶ್ರೀಗಳ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಯಿತು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್‌ಕುಮಾರ್, ಡಿವೈಎಸ್‌ಪಿ ಪ್ರಮೋದ್ ಕುಮಾರ್ ಜೈನ್, ಮಲೆನಾಡ ವೀರಶೈವ ಸಮಾಜದ ಅಧ್ಯಕ್ಷ ದಿವಾನ್, ಸಮಾಜ ಸೇವಕ ನಾರ್ವೆ ಶಿವಪ್ರಸಾದ್, ಅಕ್ಕಮ್ಮ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಲೋಕೇಶ್ ಮುಂತಾದವರಿದ್ದರು.