ಸಾರಾಂಶ
ಸ್ಥಳೀಯ ನಾಗರಿಕರು ಹಾಗೂ ಪೊಲೀಸರು ಸಕಾಲಿಕ ಕಾರ್ಯಾಚರಣೆ ನಡೆಸಿ ಒಂದು ಗಂಟೆಯ ಬಳಿಕ ಹೆದ್ದಾರಿ ಸಂಚಾರವನ್ನು ಪುನರಾರಂಭಿಸಲಾಯಿತು.
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಗುಂಡ್ಯ ಬಳಿ ಐರಾವತ ಬಸ್ , ಗೂಡ್ಸ್ ಟೆಂಪೋ ಹಾಗೂ ರಾಜಹಂಸ ಬಸ್ ನಡುವೆ ಶನಿವಾರ ಸರಣಿ ಅಪಘಾತ ಸಂಭವಿಸಿ ಒಂದು ಗಂಟೆಗಳ ಕಾಲ ಹೆದ್ದಾರಿ ಸಂಚಾರಕ್ಕೆ ತಡೆಯುಂಟಾಗಿತ್ತು.
ಪುತ್ತೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಐರಾವತ ಬಸ್ ಗೂಡ್ಸ್ ಟೆಂಪೋ ವನ್ನು ಹಿಂದಿಕ್ಕಲು ಯತ್ನಿಸಿದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಗೂಡ್ಸ್ ಟೆಂಪೋ ಚಾಲಕ ನಿಯಂತ್ರಣ ಕಳೆದುಕೊಂಡು ಎದುರುಗಡೆಯಿಂದ ಬರುತ್ತಿದ್ದ ರಾಜಹಂಸಕ್ಕೆ ಡಿಕ್ಕಿ ಹೊಡೆದು ಹೆದ್ದಾರಿ ಬದಿಯ ಹಳ್ಳಕ್ಕೆ ಬಿದ್ದಿದೆ. ಇದೇ ವೇಳೆ ರಾಜಹಂಸ ಬಸ್ಸಿಗೆ ಐರಾವತ ಬಸ್ಸು ಡಿಕ್ಕಿಹೊಡೆದು ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚಾರವಾಗದಂತೆ ತಡೆಗೋಡೆಯಂತೆ ನಿಂತಿತ್ತು. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಒಂದಷ್ಟು ಮಂದಿ ಪ್ರಯಾಣಿಕರಿಗೆ ಗುದ್ದಿದ ನೋವು ಉಂಟಾಗಿದೆ. ಸ್ಥಳೀಯ ನಾಗರಿಕರು ಹಾಗೂ ಪೊಲೀಸರು ಸಕಾಲಿಕ ಕಾರ್ಯಾಚರಣೆ ನಡೆಸಿ ಒಂದು ಗಂಟೆಯ ಬಳಿಕ ಹೆದ್ದಾರಿ ಸಂಚಾರವನ್ನು ಪುನರಾರಂಭಿಸಲಾಯಿತು. ಘಟನೆಯಿಂದ ವಾಹನಗಳಿಗೆ ಹಾನಿಯುಂಟಾಗಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.