ಸಾರಾಂಶ
ಹಟ್ಟಿಚಿನ್ನದಗಣಿ: ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ(150ಎ)ಯ ಗುರುಗುಂಟಾ ಸಮೀಪದ ಗೋಲಪಲ್ಲಿ ಬಳಿ ಭಾನುವಾರ ಬೆಳಗ್ಗೆ 4 ಲಾರಿಗಳು ಒಂದು ಬೊಲೆರೊ ಪಿಕಪ್ ವಾಹನ ಹಾಗೂ ಒಂದು ದ್ವಿಚಕ್ರ ವಾಹನದ ಮಧ್ಯೆ ಸರನಿ ಅವಘಡ ಸಂಭವಿಸಿದೆ. ದ್ವಿಚಕ್ರ ವಾಹನ ಲಾರಿ ಅಡಿ ಸಿಲುಕಿ ನಜ್ಜುಗುಜ್ಜಾಗಿದ್ದು, ಲಾರಿಗೆ ಡಿಕ್ಕಿ ಹೊಡೆದ ಬೊಲೆರೊ ಪಿಕಪ್ ವಾಹನ ಜಖಂಗೊಂಡಿದೆ. ಇದಕ್ಕೆ ಮೊದಲೇ ಶುಕ್ರವಾರ ಒಂದು ಲಾರಿ ಅಪಘಾತಕ್ಕೆ ಈಡಾಗಿತ್ತು. ರಸ್ತೆಯ ಮೇಲೆಯೇ ಬಿದ್ದಿದ್ದ ಲಾರಿಗೆ ಒಂದಕ್ಕೊಂದು ವಾಹನಗಳು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.ಹೆದ್ದಾರಿ ಬಂದ್: ಬೆಳಗಿನ ಜಾವ 7ರಿಂದ ಮಧ್ಯಾಹ್ನ 12ರವರೆಗೆ ಐದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು ಕಲಬುರ್ಗಿ, ಬೀದರ್ ಕಡೆಗೆ ಹೊರಡುವ ಸಾರಿಗೆ ಬಸ್‌ಗಳು ಸರಕು ಸಾಗಾಣಿಕೆ ವಾಹನಗಳು ಸೇರಿದಂತೆ ದ್ವಿಚಕ್ರ ವಾಹನಗಳು ಪೈದೊಡ್ಡಿ, ಸೋಮನಮರಡಿ, ಜಾಲಹಳ್ಳಿ, ಹಟ್ಟಿಚಿನ್ನದಗಣಿ, ಯರಡೋಣಾ, ಗುರುಗುಂಟಾ, ಗೌಡೂರು, ಯಲಗಟ್ಟಾ ಗ್ರಾಮಗಳ ಮುಖಾಂತರ ಸುಮಾರು 30-40 ಕಿ.ಮೀ. ಹೆಚ್ಚುವರಿಯಾಗಿ ಸುತ್ತುವರಿದು ಮಾರ್ಗ ಬದಲಾವಣೆಯೊಂದಿಗೆ ಸಂಚರಿಸುತ್ತಿದ್ದ ದೃಶ್ಯ ಕಂಡುಬಂದಿತು.
ಸ್ಥಳಕ್ಕೆ ಹಟ್ಟಿ ಸಿಪಿಐ ಹೊಸಕೇರಪ್ಪ ವಾಹನಗಳನ್ನು ತೆರವು ಮಾಡಿ, ಸಂಚಾರ ದಟ್ಟಣೆಯಾಗದಂತೆ ಓಡಾಟಕ್ಕೆ ರಸ್ತೆ ಮುಕ್ತಗೊಳಿಸಿದರು. ಈ ಕುರಿತು ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.