ನಿಡಗುಂದಿ: ಲಾರಿಯೊಂದು ಬೈಕ್ ಹಾಗೂ ಆ್ಯಂಬುಲೆನ್ಸ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ರಜೆ ಮೇಲೆ ಬಂದಿದ್ದ ಯೋಧ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ- 50ರ ಹೊಸ ಬಸ್‌ನಿಲ್ದಾಣದ ಮುಂಭಾಗ ಬುಧವಾರ ಸಂಭವಿಸಿದೆ.

ನಿಡಗುಂದಿ: ಲಾರಿಯೊಂದು ಬೈಕ್ ಹಾಗೂ ಆ್ಯಂಬುಲೆನ್ಸ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ರಜೆ ಮೇಲೆ ಬಂದಿದ್ದ ಯೋಧ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ- 50ರ ಹೊಸ ಬಸ್‌ನಿಲ್ದಾಣದ ಮುಂಭಾಗ ಬುಧವಾರ ಸಂಭವಿಸಿದೆ.

ಬೈಕ್ ಸವಾರ, ಮುದ್ದೇಬಿಹಾಳ ತಾಲೂಕು ಕಾಳಗಿ ತಾಂಡಾದ ನಿವಾಸಿ, ಯೋಧ ಮೌನೇಶ ರಾಠೋಡ (35) ಹಾಗೂ ಕೇರಳ ಮೂಲದ ಆ್ಯಂಬುಲೆನ್ಸ್‌ ಚಾಲಕ ರಿತೇಶಕುಮಾರ (50) ಮೃತಪಟ್ಟವರು. ಗುಜರಾತ್‌ನಿಂದ ಬೆಂಗಳೂರು ಕಡೆಗೆ ವೇಗವಾಗಿ ಹೊರಟಿದ್ದ ಲಾರಿ, ನಿಡಗುಂದಿ ಬಳಿಯ ಬಸ್‌ ನಿಲ್ದಾಣದ ಮುಂಭಾಗ ಬೈಕ್ ಹಾಗೂ ಆ್ಯಂಬುಲೆನ್ಸ್‌ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಗುಜರಾತ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್‌ಎಫ್ ಯೋಧ ಮೌನೇಶ ರಜೆ ಮೇಲೆ ಊರಿಗೆ ಬಂದಿದ್ದರು. ಬುಧವಾರ ಬೆಳಗ್ಗೆ ಬೈಕ್‌ನಲ್ಲಿ ಕಾಳಗಿ ತಾಂಡಾದಿಂದ ನಿಡಗುಂದಿ ಮಾರ್ಗವಾಗಿ ಬಾಗಲಕೋಟ ಜಿಲ್ಲೆಯ ಆಲೂರು ತಾಂಡಾಗೆ ಪತ್ನಿ ನಿರ್ಮಲಾ ಅವರನ್ನು ಭೇಟಿಯಾಗಿ ಮರಳಿ ಸೇನೆಗೆ ವಾಪಸಾಗಲು ತೆರಳುತ್ತಿದ್ದರು. ನಿಡಗುಂದಿಯ ಹೆದ್ದಾರಿಯ ಮೇಲೆ ಸಾಗುತ್ತಿದ್ದಾಗ ವೇಗವಾಗಿ ಬಂದ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಂತರ ಆ್ಯಂಬುಲೆನ್ಸ್‌ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ, ಆ್ಯಂಬುಲೆನ್ಸ್‌ ಚಾಲಕ ಕೂಡ ಸಾವನಪ್ಪಿದ್ದಾನೆ. ನಂತರ ಬಸ್‌ ನಿಲ್ದಾಣದೊಳಗೆ ತೆರಳುತ್ತಿದ್ದ ಗೋವಾ ರಾಜ್ಯದ ಬಸ್‌ಗೂ ಲಾರಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಬಸ್‌ನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪಘಾತಕ್ಕಿಡಾದ ಲಾರಿ, ಆ್ಯಂಬುಲೆನ್ಸ್‌, ಬೈಕ್ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆ್ಯಂಬುಲೆನ್ಸ್‌ ಹಾಗೂ ಲಾರಿ ಸಹಾಯಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಕುರಿತು ನಿಡಗುಂದಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.