ಒಕ್ಕಲಿಗರ ಬೀದಿಯ ಮನೆಗಳಲ್ಲಿ ಸರಣಿ ಕಳ್ಳತನ: ನಾಗರಿಕರ ಆತಂಕ

| Published : Oct 18 2024, 12:06 AM IST

ಸಾರಾಂಶ

ಕೆಂಪಮ್ಮನ ಮನೆಯಲ್ಲಿ ಕುರಿಮಾರಿ ಮನೆಯಲ್ಲಿಟ್ಟಿದ್ದ ನಗದು 35 ಸಾವಿರ ರು., ಒಂದು ಚಿನ್ನದ ಉಂಗುರ ಹಾಗು ಸಣ್ಣಪುಟ್ಟ ಆಭರಣಗಳು, ಮೂಡಲಬಾಗಿಲ ರುಕ್ಮಿಣಿಯ ಮನೆಯಲ್ಲಿ 10 ಸಾವಿರ ರು. ನಗದು ಹಾಗೂ ೨೦ ಸಾವಿರ ಮೌಲ್ಯದ ಬೆಳ್ಳಿಸಾಮಗ್ರಿಗಳು ಕಳುವಾಗಿವೆ ಎಂದು ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಒಕ್ಕಲಿಗರ ಬೀದಿಯ ಹಲವು ಮನೆಗಳಿಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಒಕ್ಕಲಿಗರ ಬೀದಿ ರೈತಭವನದ ಪಕ್ಕದ ಲೇ.ತಮ್ಮಣ್ಣೇಗೌಡರ ಪತ್ನಿ ಕೆಂಪಮ್ಮ, ನಂಜುಂಡೇಗೌಡರ ಪುತ್ರ ಈರೇಗೌಡ, ಲೀಲಾವತಿ, ಸವಿತಾ ಸಮಾಜದ ಬೀದಿ ಮರಿಯಮ್ಮ, ಮೂಡಲಬಾಗಿಲು ರುಕ್ಷ್ಮಿಣಿ, ಬಸವರಾಜು ಇತರರ ಮನೆಗಳಲ್ಲಿ ಸರಣಿ ಕಳ್ಳತನವಾಗಿದೆ.

ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿರುವ ಕಳ್ಳರು, ರಾತ್ರಿ ವೇಳೆ ಮುಂಬಾಗಿಲಿನ ಬೀಗ ಒಡೆದು ಒಳನುಗ್ಗಿದ್ದಾರೆ. ಮನೆ ಬೀರುಗಳ ಬೀಗ ಜಜ್ಜಿ ಲಾಕರ್ ತೆರೆದು ಚಿನ್ನ, ಬೆಳ್ಳಿ , ನಗದು ಸೇರಿದಂತೆ ಸಾವಿರಾರು ರು. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

ಮನೆಗಳ ಲಾಕರ್‌ನಲ್ಲಿದ್ದ ಚಿನ್ನಾಭರಣ ದಾಖಲೆಗಳನ್ನು ಚೀಲದಲ್ಲಿ ತುಂಬಿಕೊಂಡು ಹೋಗಿ ಪಾಳುಮನೆಯೊಂದರ ಬಳಿ ಪರಿಶೀಲಿಸಿರುವ ಕಳ್ಳರು, ಬೆಲೆಬಾಳುವ ವಸ್ತುಗಳನ್ನು ದೋಚಿ ದಾಖಲೆಗಳನ್ನು ಸುಟ್ಟು ಹೋಗಿದ್ದಾರೆ ಎಂದು ನಾಗರಿಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೆಂಪಮ್ಮನ ಮನೆಯಲ್ಲಿ ಕುರಿಮಾರಿ ಮನೆಯಲ್ಲಿಟ್ಟಿದ್ದ ನಗದು 35 ಸಾವಿರ ರು., ಒಂದು ಚಿನ್ನದ ಉಂಗುರ ಹಾಗು ಸಣ್ಣಪುಟ್ಟ ಆಭರಣಗಳು, ಮೂಡಲಬಾಗಿಲ ರುಕ್ಮಿಣಿಯ ಮನೆಯಲ್ಲಿ 10 ಸಾವಿರ ರು. ನಗದು ಹಾಗೂ ೨೦ ಸಾವಿರ ಮೌಲ್ಯದ ಬೆಳ್ಳಿಸಾಮಗ್ರಿಗಳು ಕಳುವಾಗಿವೆ ಎಂದು ದೂರು ನೀಡಿದ್ದಾರೆ. ಸರಣಿಗಳ್ಳತನದಿಂದ ಮೇಲುಕೋಟೆ ನಾಗರಿಕರು ಆತಂಕಗೊಂಡಿದ್ದಾರೆ. ಗುರುವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪ್ರಖ್ಯಾತ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯಗಳಿಗೆ ರಾತ್ರಿಯ ವೇಳೆ ಹೆಚ್ಚಿನ ಭದ್ರತೆ ನೀಡಬೇಕೆಂದೂ ಒತ್ತಾಯಿಸಿದ್ದಾರೆ.