ಬಾಣಂತಿಯರ ಸರಣಿ ಸಾವು: ಸದನದಲ್ಲಿ ಪ್ರಶ್ನಿಸಿದ ಸರ್ಜಿ

| Published : Dec 18 2024, 12:49 AM IST

ಬಾಣಂತಿಯರ ಸರಣಿ ಸಾವು: ಸದನದಲ್ಲಿ ಪ್ರಶ್ನಿಸಿದ ಸರ್ಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ವಿಚಾರ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಈ ಸರಣಿ ಸಾವಿನ ಹಿನ್ನೆಲೆಯಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೀರಾ ಹಾಗೂ ರಾಜ್ಯದ ಜನತೆಗೆ ಯಾವ ರೀತಿ ಆತ್ಮ ಸ್ಥೈರ್ಯ ತುಂಬಿದ್ದೀರಾ ಎಂದು ಶಾಸಕ ಡಾ. ಧನಂಜಯ ಸರ್ಜಿ ಅವರು ಸರ್ಕಾರವನ್ನು ಪ್ರಶ್ನಿಸಿದರು.

ರಾಜ್ಯದ ಜನತೆಗೆ ಯಾವ ರೀತಿ ಆತ್ಮ ಸ್ಥೈರ್ಯ ತುಂಬಿದ್ದೀರಾ ಎಂದು ಸರ್ಕಾರಕ್ಕೆ ತರಾಟೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ವಿಚಾರ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಈ ಸರಣಿ ಸಾವಿನ ಹಿನ್ನೆಲೆಯಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೀರಾ ಹಾಗೂ ರಾಜ್ಯದ ಜನತೆಗೆ ಯಾವ ರೀತಿ ಆತ್ಮ ಸ್ಥೈರ್ಯ ತುಂಬಿದ್ದೀರಾ ಎಂದು ಶಾಸಕ ಡಾ. ಧನಂಜಯ ಸರ್ಜಿ ಅವರು ಸರ್ಕಾರವನ್ನು ಪ್ರಶ್ನಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ 154ನೇ ವಿಧಾನ ಪರಿಷತ್ ಕಲಾಪದಲ್ಲಿ ಮಂಗಳವಾರ ಬಳ್ಳಾರಿಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ, ಬಳ್ಳಾರಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಬಳಿಕ ಆಸ್ಪತ್ರೆಗೆ ಹೆರಿಗೆ ಮತ್ತು ಇತರೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಕ್ಷೀಣಿಸಿದೆ. ಬಳ್ಳಾರಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ 580 ಹೆರಿಗೆ, ಅಕ್ಟೋಬರ್ ನಲ್ಲಿ 577 ಹಾಗೂ ಬಾಣಂತಿಯರ ಸಾವಿನ ಪ್ರಕರಣ ನಡೆದ ನಂತರ 289 ಹೆರಿಯಾದರೆ, ಡಿಸೆಂಬರ್ 14 ರ ಅಂಕಿ ಅಂಶದಂತೆ 74 ಹೆರಿಯಾಗಿದೆ. ಗರ್ಭಿಣಿಯರು ಆತಂಕಗೊಂಡು ಬಳ್ಳಾರಿ ಆಸ್ಪತ್ರೆಗೆ ಬರುವುದು ಕಡಿಮೆಯಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಪ್ರೊಜನ್‌ರಿಂಗರ್ ಲ್ಯಾಕ್ಟೆಡ್ ಎಂಬ ಮೆಡಿಸಿನ್‌ನಿಂದ ಸಮಸ್ಯೆ ಎದುರಾಗಿದೆ ಎಂದು ಸಚಿವರು ಹೇಳುತ್ತಿದ್ದಾರೆ, ಆದರೆ ಸಾಮಾನ್ಯವಾಗಿ ರಿಂಗರ್ ಲ್ಯಾಕ್ಟೆಡ್ ಮೆಡಿಸನ್ ಅನ್ನು ಫ್ರೀಜ್ ಮಾಡುವ ಹಾಗೆ ಇಲ್ಲ. ಹಾಗೂ ಅಷ್ಟು ದೊಡ್ಡ ಜಿಲ್ಲಾಸ್ಪತ್ರೆಯಲ್ಲಿ ಆ ಮೆಡಿಸಿನ್ ಬಾಣಂತಿಯರಿಗೆ ಮಾತ್ರ ನೀಡಿರುವುದಿಲ್ಲ, ಬೇರೆ ರೋಗಿಗಳಿಗೂ ಬಳಸಿರುತ್ತಾರೆ. ಆದರೆ ಬೇರೆ ರೋಗಿಗಳಿಗೆ ಅಷ್ಟು ಸಮಸ್ಯೆ ಆಗದ ಈ ಮೆಡಿಸನ್ ಬಾಣಂತಿಯರಿಗೆ ಮಾತ್ರ ಯಾಕೆ ಇಷ್ಟೊಂದು ಸಮಸ್ಯೆಯಾಗಿದೆ ಎಂದು ಹರಿಹಾಯ್ದರು.

ಐವಿ ಪ್ಲ್ಯೂಡ್ ನ ರಿಯಾಕ್ಷನ್ ಆಗುವ ಸಾಧ್ಯತೆ ತೀರಾ ಕಡಿಮೆ. ಐವಿ ಪ್ಲ್ಯೂಡ್ ನ ಬಹು ಅಂಗಾಂಗಳಿಗೆ ತೊಂದರೆಯಾಗಿದೆ ಎಂಬ ವರದಿ ಇದೆ, ಸಮಸ್ಯೆ ಆಗುವುದಾದರೆ ಇತರರಿಗೂ ಆಗಬೇಕಿತ್ತು, ಇದು ಹಾಗಾಗಿಲ್ಲ, ಹಾಗಿದ್ದರೆ ಐವಿಫ್ಯೂ ಅವಧಿ ಮುಗಿದಿತ್ತಾ ? ಇಲ್ಲವೇ ಫಂಗಸ್ ಬೆಳೆದಿತ್ತಾ? ಯಾಕಾಗಿ ಅದೇ ಕಂಪನಿಯಿಂದ ಖರೀದಿಸಲಾಗುತ್ತಿದೆ, ದರವೆಷ್ಟು? ಬೇರೆ ಕಂಪನಿಗಳಿಗೂ ಇದಕ್ಕೂ ಇರುವ ವ್ಯತ್ಯಾಸವೇನು? ಆ ಕಂಪನಿಯನ್ನೇ ಆಯ್ಕೆ ಮಾಡಿರುವ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರವನ್ನು ಡಾ. ಧನಂಜಯ ಸರ್ಜಿ ಆಗ್ರಹಿಸಿದರು.