ಪದೇ ಪದೇ ಅತ್ಯಾಚಾರದಿಂದ ನಲುಗಿರುವ ಬಾಲಕಿ ವಿಧಿ ಇಲ್ಲದೇ ಅನ್ಯಾಯವನ್ನು ಪಾಲಕರ ಎದುರು ಹೇಳಿದಾಗ ಪಾಲಕರು ನೀಡಿದ ದೂರಿನ್ವಯ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ಸೋಮರಡ್ಡಿ ಅಳವಂಡಿ ಕೊಪ್ಪಳ
ಪ್ರೀತಿಸುವ ನಾಟಕವಾಡಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೇ, ಆ ವಿಡಿಯೋ ಚಿತ್ರಿಸಿಕೊಂಡು ಅದನ್ನು ತನ್ನ ಸ್ನೇಹಿತರಿಗೂ ಶೇರ್ ಮಾಡಿ ಅವರೂ ಸಹ ವಿಡಿಯೋ ತೋರಿಸಿ ಈ ಬಾಲಕಿಯನ್ನು ಬ್ಲಾಕ್‌ಮೇಲ್ ಮಾಡಿ ಸರಣಿ ಅತ್ಯಾಚಾರ ಮಾಡಿದ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ.ವಿಡಿಯೋ ಬಾಲಕಿಗೆ ತೋರಿಸಿ ಬೆದರಿಸಿದ್ದಲ್ಲದೇ, ಸಹಕರಿಸದಿದ್ದರೆ ಸೋಶಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಸರಣಿ ಅತ್ಯಾಚಾರ ನಡೆಸಿರುವ ಕೃತ್ಯದಿಂದ ಬಾಲಕಿ ಎರಡು ವರ್ಷಗಳ ಕಾಲ ನರಕ ಅನುಭವಿಸಿ ಈಗ ಗರ್ಭಿಣಿಯಾಗಿದ್ದಾಳೆ.
ಪದೇ ಪದೇ ಅತ್ಯಾಚಾರದಿಂದ ನಲುಗಿರುವ ಬಾಲಕಿ ವಿಧಿ ಇಲ್ಲದೇ ಅನ್ಯಾಯವನ್ನು ಪಾಲಕರ ಎದುರು ಹೇಳಿದಾಗ ಪಾಲಕರು ನೀಡಿದ ದೂರಿನ್ವಯ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೊದಲು ಇಬ್ಬರನ್ನು ಬಂಧಿಸಿದ್ದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಏಳು ಜನರನ್ನು ಬಂಧಿಸಿದ್ದಾರೆ.ಎರಡು ವರ್ಷಗಳ ನರಕ: ಆಗ ಬಾಲಕಿ ಒಂಬತ್ತನೇ ತರಗತಿ ವಿದ್ಯಾರ್ಥಿನಿ. ಆಗಲೇ ಗ್ರಾಮದ ಯುವಕನೋರ್ವನನ್ನು ಪ್ರೀತಿಸಿದ್ದಳು. ಪ್ರೀತಿಯ ಬಲೆಗೆ ಬಿದ್ದ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಕಾಮದಾಟ ಆಡಿದ್ದಾನೆ. ಎರಡು ವರ್ಷಗಳ ಹಿಂದೆ ಕಾಮದಾಟವಾಡಿ ಅದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಚಿತ್ರೀಕರಿಸಿಕೊಂಡ ದೃಶ್ಯಾವಳಿ ಆತ್ಮೀಯ ಸ್ನೇಹಿತರಿಗೆ ತೋರಿಸಿದ್ದಾನೆ, ಶೇರ್ ಸಹ ಮಾಡಿದ್ದಾನೆ.
ಸರಣಿ ಅತ್ಯಾಚಾರ: ಸ್ನೇಹಿತ ನೀಡಿದ ಕಾಮದಾಟದ ದೃಶ್ಯಾವಳಿ ಬಾಲಕಿಗೆ ತೋರಿಸಿ ಅನೇಕರು ಅತ್ಯಾಚಾರವೆಸಗಿದ್ದಾರೆ. ನನ್ನೊಂದಿಗೆ ನೀನು ಸಹಕರಿಸದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿ ಬಿಡುವುದಾಗಿ ಹೇಳಿ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಎಸೆಗಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಹಾಗೂ ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.ಬಂಧಿತರು: ಪ್ರಕರಣದಲ್ಲಿ ಕಿರಣ್ ಕುಮಾರ್ ತೊಂಡಿಹಾಳ, ಹರ್ಷ ಪೊಲೀಸ್ ಪಾಟೀಲ್, ರಮೇಶ್ ಚಿಪ್ಪವರ, ಮಲ್ಲಪ್ಪ ಹರಿಜನ, ಸಿದ್ದಲಿಂಗಪ್ಪ ವಾಲ್ಮೀಕಿ, ಕಿರಣ ಕುಮಾರ ಆಧೋನಿ ಹಾಗೂ ಫಕೀರಪ್ಪ ಧರ್ಮಾಪುರ ಎನ್ನುವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಶಿಕ್ಷಣ ಮೊಟಕು: ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಬಾಲಕಿ ಪ್ರೇಮದ ಮೋಹಕ್ಕೆ ಬಿದ್ದು ಕಾಮದಾಟದ ವಿಡಿಯೋ ದೃಶ್ಯಾವಳಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ ಎನ್ನುವ ಆತಂಕದಿಂದಲೇ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣಳಾಗಿ ಶಿಕ್ಷಣ ಮೊಟಕುಗೊಳಿಸಿ ನರಕಯಾತನೆ ಅನುಭವಿಸುತ್ತಿದ್ದಾಳೆ. ಮಾಡಿದ ಒಂದು ತಪ್ಪು ಇಡೀ ಬದುಕನ್ನೇ ಹಾಳು ಮಾಡಿಕೊಂಡು ಸಂಕಷ್ಟದಲ್ಲಿದ್ದಾಳೆ. ಬಾಲಕಿಯನ್ನು ಈಗ ಕೊಪ್ಪಳ ಬಾಲ ಮಂದಿರದಲ್ಲಿ ಇರಿಸಿ ಮನೋ ಧೈರ್ಯ ತುಂಬುವ ಮೂಲಕ ಆಕೆಯನ್ನು ಸಂರಕ್ಷಣೆ ಮಾಡಲಾಗುತ್ತಿದೆ.ಪೋಕ್ಸೋ ಕೇಸ್ : ಬಾಲಕಿ ಅಪ್ರಾಪ್ತೆಯಾಗಿರುವುದರಿಂದ ಪೋಕ್ಸೋ ಕೇಸ್ ದಾಖಲಿಸಿ, ಆರೋಪಿಗಳನ್ನು ಜೈಲಿಗಟ್ಟಲಾಗಿದೆ. ಇನ್ನೂ ಕೆಲ ಆರೋಪಿಗಳು ಇದ್ದಾರೆ ಎನ್ನಲಾಗುತ್ತಿದ್ದು, ತನಿಖೆ ಮುಂದುವರಿದಿದೆ.