ಪೊಲೀಸ್‌ ಠಾಣೆ ಪರಿಸರದ 6 ಮನೆಗಳಲ್ಲಿ ಸರಣಿ ಕಳ್ಳತನ!

| Published : Oct 01 2024, 01:35 AM IST

ಸಾರಾಂಶ

ಎಲ್ಲ 6 ಮನೆಗಳ ಚಿಲಕಗಳನ್ನು ಬಲವಾಗಿ ಮೀಟಿ ತುಂಡರಿಸಿರುವ ಖದೀಮರು, 3 ಮನೆಗಳಿಂದ ಒಟ್ಟು 120 ಗ್ರಾಂ ಚಿನ್ನ, 40 ಸಾವಿರ ರು. ನಗದು ಕಳವು ಮಾಡಿದ್ದಾರೆ. ಉಳಿದ ಮೂರು ಮನೆಯಲ್ಲಿ ಯಾವುದೇ ಸೊತ್ತು ಕಳ್ಳತನವಾಗಿಲ್ಲ. ಕಳ್ಳರು ಚಿನ್ನ ಮತ್ತು ನಗದು ಕಳ್ಳತನಕ್ಕೆಂದೇ ಬಂದಿದ್ದು, ಟಿವಿ, ಕಂಪ್ಯೂಟರ್ ಇತ್ಯಾದಿಗಳನ್ನು ಮುಟ್ಟಿಲ್ಲ.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ಮಿಷನ್ ಕಂಪೌಂಡ್ ಜಂಕ್ಷನ್ ಬಳಿಯ ಕಂದಾಯ ಇಲಾಖೆ ನೌಕರರ ವಸತಿ ಸಮುಚ್ಛಯದ 6 ಮನೆಗೆ ಭಾನುವಾರ ತಡರಾತ್ರಿ ಕಳ್ಳರು ನುಗ್ಗಿ ಲಕ್ಷಾಂತರ ರು. ನಗನಗದು ಕಳ್ಳತನ ನಡೆಸಿದ್ದಾರೆ.ನಗರ ಠಾಣೆಯಿಂದ ಕೇವಲ ನೂರು ಮೀಟರ್ ದೂರದಲ್ಲಿ ಈ ವಸತಿ ಸಮುಚ್ಛಯವಿದ್ದು, ಅದರಲ್ಲಿ ಯಾರು ಇಲ್ಲದೇ ಬೀಗ ಹಾಕಿದ್ದ 6 ಮನೆಗಳಲ್ಲಿ ಈ ಕಳ್ಳತನ ನಡೆದಿದೆ. ಈ ಘಟನೆ ಉಡುಪಿಯ ಜನತೆಯನ್ನು ಬೆಚ್ಚಿ ಬೀಳಿಸಿದೆ.ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚುವರಿ ಎಸ್ಪಿಗಳಾದ ಸಿದ್ದಲಿಂಗಪ್ಪ, ಪಿ.ಎ ಹೆಗಡೆ, ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಸದಸ್ಯರಾದ ರಮೇಶ್ ಕಾಂಚನ್, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ನಗರ ಠಾಣಾ ಪೋಲಿಸರು ಭೇಟಿ ನೀಡಿದ್ದಾರೆ.ಎಲ್ಲ 6 ಮನೆಗಳ ಚಿಲಕಗಳನ್ನು ಬಲವಾಗಿ ಮೀಟಿ ತುಂಡರಿಸಿರುವ ಖದೀಮರು, 3 ಮನೆಗಳಿಂದ ಒಟ್ಟು 120 ಗ್ರಾಂ ಚಿನ್ನ, 40 ಸಾವಿರ ರು. ನಗದು ಕಳವು ಮಾಡಿದ್ದಾರೆ. ಉಳಿದ ಮೂರು ಮನೆಯಲ್ಲಿ ಯಾವುದೇ ಸೊತ್ತು ಕಳ್ಳತನವಾಗಿಲ್ಲ. ಕಳ್ಳರು ಚಿನ್ನ ಮತ್ತು ನಗದು ಕಳ್ಳತನಕ್ಕೆಂದೇ ಬಂದಿದ್ದು, ಟಿವಿ, ಕಂಪ್ಯೂಟರ್ ಇತ್ಯಾದಿಗಳನ್ನು ಮುಟ್ಟಿಲ್ಲ.* ಸಿಸಿ ಕ್ಯಾಮರಾ, ಬೀದಿ ದೀಪಗಳಿಲ್ಲ!

ಜಿಲ್ಲಾಡಳಿತ ನಿರ್ವಹಣೆ ಮಾಡುವ ಈ ವಸತಿ ಸಮುಚ್ಛಯದಲ್ಲಿ ಒಟ್ಟು 34 ಕುಟುಂಬಗಳ ವಾಸವಿದೆ. ಆದರೆ ಕಟ್ಟಡದ ಯಾವ ಭಾಗದಲ್ಲಿಯೂ ಒಂದೇ ಒಂದು ಸಿಸಿ ಕ್ಯಾಮರಾ ಇಲ್ಲ. ಸಾರ್ವಜನಿಕರಿಗೆ ಸಿಸಿ ಕ್ಯಾಮರಾ ಅಳವಡಿಸಿ ಎಂದು ಹೇಳುವ ಆಡಳಿತ ತನ್ನ ನೌಕರರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.ಅಲ್ಲದೇ ಈ ವಸತಿ ಸಮುಚ್ಛಯದ ಆವರಣದಲ್ಲಿರುವ ವಿದ್ಯುತ್ ಕಂಬದಲ್ಲಿ ದಾರಿದೀಪಗಳು ಕೆಟ್ಟಿದ್ದು, ಅದು ಉರಿಯುತ್ತಿಲ್ಲ. ಸೋಮವಾರ ಬೆಳಗ್ಗೆ ತರಾತುರಿಯಲ್ಲಿ ದಾರಿ ದೀಪವನ್ನು ಹಾಕಲಾಗಿದೆ. ಇದೆಲ್ಲವನ್ನು ತಿಳಿದುಕೊಂಡೇ ಕಳ್ಳರು, ಪೊಲೀಸ್ ಠಾಣೆಯ ಪರಿಸರದಲ್ಲಿಯೇ ಕಳ್ಳತನದ ಧೈರ್ಯ ತೋರಿದ್ದಾರೆ. ಪೊಲೀಸರಿಗೆ ಸವಾಲು ಹಾಕಿದ್ದಾರೆ.

-------ಡೆಂಘೀ ಚಿಕಿತ್ಸೆಗೆ ತಂದಿಟ್ಟ ಹಣ

ಚಿನ್ನ ಕಳೆದುಕೊಂಡ ಮನೆಯ ನಿವಾಸಿ ಪ್ಲಾವಿಯ ಡಿಸೋಜ ಪ್ರತಿಕ್ರಿಯಿಸಿ, ಪಕ್ಕದ ಮನೆಯಲ್ಲಿ ಯಾರು ಇರಲಿಲ್ಲ. ಆದ್ದರಿಂದ ನಾನೂ ಒಬ್ಬಳೇ ಇರುವುದು ಬೇಡ ಎಂದು ಸ್ನೇಹಿತೆಯ ಮನೆಗೆ ಹೋಗಿ ಮಲಗಿದ್ದೆ. ಸೋಮವಾರ ಬೆಳಗ್ಗೆ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಒಳಗೆ ಹೋದಾಗ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಜೀವಮಾನವಿಡೀ ದುಡಿದು ಖರೀದಿಸಿದ ಚಿನ್ನಾಭರಣ ಕಳವಾಗಿದೆ. ಡೆಂಘೀ ಬಂದು ಸುಧಾರಿಸಿಕೊಳ್ಳುತ್ತಿದ್ದೆ, ಅದರ ಚಿಕಿತ್ಸೆಗೆ 25 ಸಾವಿರ ರು. ಹಣವನ್ನು ಡ್ರಾ ಮಾಡಿ ತಂದಿದ್ದೆ. ಅದನ್ನು ಕಳವು ಮಾಡಿದ್ದಾರೆ ಎಂದಿದ್ದಾರೆ.

----------

ಬಕೆಟ್ ನಲ್ಲಿಟ್ಟಿದ್ದ ಚಿನ್ನ ಸೇಫ್!

ಇದೇ ವಸತಿ ಸಮುಚ್ಛಯದಲ್ಲಿರುವ ಮತ್ತೋರ್ವ ಸರ್ಕಾರಿ ನೌಕರರು ರಜೆಗೆ ಊರಿಗೆ ತೆರಳುವಾಗ ಮನೆಯಲ್ಲಿದ್ದ ಚಿನ್ನಾಭರಣವನ್ನು ಬಟ್ಟೆಯಲ್ಲಿ ಕಟ್ಟಿ, ಬಕೆಟ್‌ನೊಳಗೆ ಇಟ್ಟು ಹೋಗಿದ್ದರು. ಪೆಟ್ಟಿಗೆ, ಬೀರುಗಳನ್ನು ಜಾಲಾಡಿ, ಬಟ್ಟೆಬರೆಗಳನ್ನು ಹೊರಗೆಳೆದು ಹಾಕಿದ್ದ ಕಳ್ಳರು, ಬಕೆಟ್‌ನತ್ತ ಗಮನ ಹರಿಸದಿದ್ದುದರಿಂದ ಲಕ್ಷಾಂತರ ರು.ಗಳ ಚಿನ್ನಾಭರಣ ಸುರಕ್ಷಿತವಾಗಿ ಉಳಿದುಕೊಂಡಿತ್ತು.