ಸಾರಾಂಶ
ಗೌರಿಬಿದನೂರು: ನಗರದಲ್ಲಿ ಸುಪ್ರಸಿದ್ಧ ಪುರಾತನ ಶ್ರೀ ಗಣೇಶನ ದೇವಾಲಯ ಮತ್ತು ಪಕ್ಕದ ಶ್ರೀ ರಾಘವೇಂದ್ರ ಸ್ಟೋರ್ ನಲ್ಲಿ ಮಂಗಳವಾರ ರಾತ್ರಿ ಸುಮಾರು 12 ಗಂಟೆಯ ನಂತರ ಸರಣಿ ಕಳ್ಳತನ ನಡೆದಿದ್ದು, ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಪ್ರಸಿದ್ಧ ಶ್ರೀ ಗಣೇಶನ ದೇವಸ್ಥಾನ ಮತ್ತು ಅಂಗಡಿಗಳ ಬೀಗ ಮುರಿದು ಅಂಗಡಿಯಲ್ಲಿದ್ದ ಚಿಲ್ಲರೆ ಕಾಸು ಮತ್ತು ದೇವಸ್ಥಾನದ 10 ಸಾವಿರ ರು. ಹಣವಿದ್ದ ಹುಂಡಿಯನ್ನು ಕಳ್ಳರು ಕದ್ದೊಯ್ದು ಪರಾರಿಯಾಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಗೌರಿಬಿದನೂರು ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ. ಅಂಗಡಿ ಮಾಲೀಕ ರಾಘವೇಂದ್ರ ಮತ್ತು ಚೇತನ್ ಮಾತನಾಡಿ, ಮೂರು ಜನ ಕಳ್ಳರು ಸುಮಾರು 12 ಗಂಟೆ ಸಮಯದಲ್ಲಿ ಮಾಸ್ಕ್ ಧರಿಸಿ ಸಿಸಿ ಕ್ಯಾಮೆರಾ ಮೇಲಕ್ಕೆ ತಿರುಗಿಸಿ ಅಂಗಡಿ ಬೀಗ ಮುರಿದು ಅಂಗಡಿಯಲ್ಲಿದ್ದ ಪುಡಿಗಾಸು ಮತ್ತೆ ಹಳೆಯ ನೋಟುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು. ದೇವಸ್ಥಾನದ ಅರ್ಚಕ ಶ್ರೀನಿವಾಸ್ ಮಾತನಾಡಿ, ಕಳೆದ ರಾತ್ರಿ ದೇವಸ್ಥಾನದ ಬಾಗಿಲಿನ ಬೀಗ ಒಡೆದು, ಸುಮಾರು 10 ಸಾವಿರ ರು. ಇರುವ ಹುಂಡಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು. ಘಟನೆಗೆ ಸಂಬಂಧಿಸಿದಂತೆ ಗೌರಿಬಿದನೂರು ನಗರ ಠಾಣೆಯಲ್ಲಿ ಅಂಗಡಿ ಮಾಲೀಕರು ಮತ್ತು ದೇವಸ್ಥಾನದ ಅರ್ಚಕರು ದೂರು ಸಲ್ಲಿಸಿದ್ದು, ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.