ಸಾರಾಂಶ
- ಶಾಲಾ ಕಟ್ಟಡ ತೆರವಾದ ಸ್ಥಳದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಸದಸ್ಯರ ಉತ್ಸುಕತೆ । ಶಾಸಕರಿಂದಲೂ ಅಗತ್ಯ ಸಲಹೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಸ್ಥಳೀಯ ಪುರಸಭೆಯಲ್ಲಿ ಚುನಾವಣೆ ನಡೆದ 2 ವರ್ಷಗಳ ನಂತರ ಉಪಾಧ್ಯಕ್ಷೆ ನಫ್ಷಿಯಾ ಬಾನು ಚಮನ್ ಷಾ ಅಧ್ಯಕ್ಷತೆಯಲ್ಲಿ, ಶಾಸಕ ಬಿ.ಪಿ. ಹರೀಶ್ ಉಪಸ್ಥಿತಿಯಲ್ಲಿ ಪ್ರಥಮ ಬಾರಿಗೆ ಸರ್ವ ಸದಸ್ಯರ ಸಾಮಾನ್ಯ ಸಭೆ ಜರುಗಿತು.ಪುರಸಭೆ ಎದುರಿನ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿಥಿಲ ಕಟ್ಟಡ ಕೆಡವಿದ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುವ ಚರ್ಚೆ ಆರಂಭವಾಯಿತು. ಆಗ ಕಾಂಗ್ರೆಸ್ ಸದಸ್ಯರಾದ ನಯಾಜ್, ದಾದಾಪೀರ್, ಸಾಬಿರ್ ಅಲಿ, ಕೆ..ಜಿ ಲೋಕೇಶ್, ಆರೀಫ್, ಗೌಡರ ಮಂಜಣ್ನ ಮತ್ತು ವೀರಯ್ಯ ಕ್ಯಾಂಟೀನ್ ನಿರ್ಮಾಣಕ್ಕೆ ಬೆಂಬಲ ಸೂಚಿಸಿದರು. ಶಾಲೆ ಇರುವ ಪ್ರದೇಶದಲ್ಲಿ ನಾಡ ಕಚೇರಿ, ಕೃಷಿ ಇಲಾಖೆ, ಆಸ್ಪತ್ರೆ, ಹಾಸ್ಟಲ್ ಇವೆ. ಹಲವು ಗ್ರಾಮಗಳ ನಾಗರೀಕರೂ ಸಹ ಪಟ್ಟಣಕ್ಕೆ ಆಗಮಿಸುತ್ತಾರೆ. ಕಡಿಮೆ ದರದಲ್ಲಿ ಊಟ ಮಾಡುತ್ತಾರೆ. ಆ ಕಾರಣ ಮಾನವೀಯತೆ ದೃಷ್ಠಿಯಿಂದಲೂ ಇದೇ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕು ಎಂದು ಸಹಮತ ಸೂಚಿಸಿದರು.
ಮುಖ್ಯಾಧಿಕಾರಿ ಎಚ್.ಭಜಕ್ಕನವರ್ ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಅವರು ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವ ಕುರಿತು ಯಾವುದೇ ಪತ್ರ ಇನ್ನೂ ಪುರಸಭೆಗೆ ಬಂದಿಲ್ಲ ಎಂದರು.ಬಿಜೆಪಿ ಸದಸ್ಯ ಬಿ.ಸಿದ್ದೇಶ್ ಮಾತನಾಡಿ, ಇಂದಿರಾ ಕ್ಯಾಂಟೀನ್ ಸ್ಥಳದ ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿದೆ. ವಿವಾದ ಇತ್ಯರ್ಥ ಆಗವವರೆಗೂ ಕ್ಯಾಂಟೀನ್ ನಿರ್ಮಾಣ ಚರ್ಚೆ ಬೇಡ ಎಂದು ಸಲಹೆ ನೀಡಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಶಾಲಾ ಕಟ್ಟಡದ ಬಗ್ಗೆ ಲೋಕೋಪಯೋಗಿ ಇಲಾಖೆ ಕಟ್ಟಡದ ಫಿಟ್‌ನೆಸ್ ಬಗ್ಗೆ ವರದಿ ನೀಡಬೇಕು. ಪುರಸಭೆ ಜಾಗದಲ್ಲಿ ಮುಖ್ಯಾಧಿಕಾರಿಗೆ ಮಾತ್ರ ಅಧಿಕಾರಿವಿದೆ. ಎಸ್‌ಡಿಎಂಸಿ, ಶಿಕ್ಷಕ ಇಲಾಖೆಯವರ ಅಧಿಕಾರಿಗಳು ಕಟ್ಟಡ ಬೀಳಿಸುವ ಬಗ್ಗೆ ಆದೇಶ ಮಾಡಿಲ್ಲ. ಹಾಗಾಗಿ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳ ವರದಿ ತರಿಸಿ, ಮುಂದಿನ ಸಭೆಯಲ್ಲಿ ಕ್ಯಾಂಟೀನ್ ನಿರ್ಮಾಣ ಬಗ್ಗೆ ಸೂಕ್ತವಾಗಿ ಚರ್ಚಿಸಿ ಎಂದು ಸೂಚಿಸಿ, ಸಭೆಯಿಂದ ನಿರ್ಗಮಿಸಿದರು.ಪಶು ಆಸ್ಪತ್ರೆ ಆವರಣದಲ್ಲಿ ₹೧೨ ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು, ₹೬೭ ಕೋಟಿ ವೆಚ್ಚದ ಅಮೃತ ಯೋಜನೆಯಡಿ 3 ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು, ಪಟ್ಟಣದ ಪ್ರವೇಶದಲ್ಲಿ ₹೨೫ ಲಕ್ಷ ವೆಚ್ಚದಲ್ಲಿ ಕಮಾನು ನಿರ್ಮಿಸಲು, ನಗರೋತ್ಥಾನ ಯೋಜನೆಯಡಿ ₹೨೫ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಿಸಲು, ಪೌರ ಕಾರ್ಮಿಕರ ನೇಮಕಾತಿ ಮಾಡಲು ಜಿಲ್ಲಾಧಿಕಾರಿ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು, ನೀರಾವರಿ ಇಲಾಖೆ ಆವರಣದಲ್ಲಿ ಪುರಸಭೆಗೆ ಕಚೇರಿ ಕಟ್ಟಡಕ್ಕೆ ಸದಸ್ಯರ ತಂಡ ಉಪ ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವರ ಬಳಿ ತೆರಳಲು ಸಭೆಯು ಒಮ್ಮತದ ತೀರ್ಮಾನ ತೆಗೆದುಕೊಂಡಿತು.
ಮಹಿಳಾ ಸದಸ್ಯರಾದ ವಿಜಯಲಕ್ಷ್ಮೀ ಹಾಗೂ ಸುಧಾ ಕುಡಿಯುವ ನೀರು, ಬೀದಿನಾಯಿಗಳ ಕಾಟದ ಬಗ್ಗೆ ವಿಷಯ ಪ್ರಸ್ತಾಪಿಸಿ, ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದರು. ಸ್ಥಾಯಿ ಸಮಿತಿ ರಚನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು, ಆಶ್ರಯ ಯೋಜನೆಯಲ್ಲಿ ನಿವೇಶನ ಹಂಚಿಕೆ ಮುಂತಾದ ವಿಷಯಗಳು ಸಭೆಯಲ್ಲಿ ಚರ್ಚೆಯಾಯಿತು.ಅಧಿಕಾರಿಗಳಾದ ಉಮೇಶ್, ಅವಿನಾಶ್, ಕಟ್ಟಿಮನಿ, ರಾಘವೇಂದ್ರ ವಿವಿಧ ವಿಷಯವಾರು ಆದೇಶಗಳನ್ನು ಸಭೆಯ ಗಮನಕ್ಕೆ ತಂದರು.
- - - -೪ಎಂಬಿಆರ್೩:ಮಲೇಬೆನ್ನೂರಿನ ಶಾಲೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುವ ಕುರಿತು ಪುರಸಭೆ ಸಾಮಾನ್ಯ ಸಭೆ ಚರ್ಚೆ ನಡೆಸಲಾಯಿತು.