ಸಾರಾಂಶ
ಬ್ಯಾಡಗಿ: ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಪ್ರವಚನ 13ರಿಂದ 24ರ ವರೆಗೆ 12 ದಿನಗಳ ಕಾಲ ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣಲ್ಲಿ ನಡೆಯಲಿದ್ದು, ಇದಕ್ಕಾಗಿ ಪೂರ್ವ ಸಿದ್ಧತೆಗಳು ಕಳೆದ 15 ದಿನಗಳಿಂದ ಭರದಿಂದ ಸಾಗಿವೆ. ಪ್ರತಿದಿನ ಸಂಜೆ 6 ರಿಂದ 7 ವರೆಗೆ ಪ್ರವಚನ ಕಾರ್ಯಕ್ರಮ ನಡೆಯಲಿದ್ದು ಪಟ್ಟಣದ ಕ್ರೀಡಾಂಗಣದಲ್ಲಿ ಸುಮಾರು 7 ಎಕರೆ ಪ್ರದೇಶವನ್ನು ಸ್ವಚ್ಛಗೊಳಿಸಿದ್ದು ಸುಣ್ಣ ಬಣ್ಣಗಳಿಂದ ಅಲಂಕರಿಸಲಾಗಿದೆ.
ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನೀರಿಕ್ಷೆಯಿದ್ದು, ಕೆಳಗೆ ಕುಳಿತು ಪ್ರವಚನ ಕೇಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಹಿರಿಯ ಜೀವಿಗಳಿಗೆ ಪ್ರತ್ಯೇಕ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಸುತ್ತಲಿನ ಎಲ್ಲೆಡೆ ಬೆಳಕಿನ ವ್ಯವಸ್ಥೆ ಹಾಗೂ ದೊಡ್ಡ ಪ್ರಮಾಣದಲ್ಲಿ ಧ್ವನಿವರ್ಧಕ ಅಳವಡಿಸಲಾಗಿದೆ. ದಕ್ಷಿಣೋತ್ತರವಾಗಿ ನಿರ್ಮಿಸಿದ ವೇದಿಕೆಯಲ್ಲಿ ಶ್ರೀಗಳಿಗೆ ಎತ್ತರದ ಆಸನದ ವ್ಯವಸ್ಥೆ ಮಾಡಲಾಗಿದೆ.ವಾಹನಗಳ ಮಾರ್ಗ ಬದಲಾವಣೆ: ಶ್ರೀಗಳು 12 ದಿನಗಳ ಜರುಗುವ ನಿಮಿತ್ತ ಇಲ್ಲಿನ ಗುತ್ತೆಮ್ಮದೇವಿ ದ್ವಾರಬಾಗಿಲು ರಟ್ಟಿಹಳ್ಳಿ ರಸ್ತೆಯ ವಿದ್ಯಾನಗರ ಬಿಇಎಸ್ ಕಾಲೇಜುವರೆಗೆ ಹಾಗೂ ಚಿಕ್ಕನಕಟ್ಟೆಹತ್ತಿರ ದೊಡ್ಡ ನೀರಿನ ಟ್ಯಾಂಕ್‌ನಿಂದ ಕನಕದಾಸ ಕಲಾಭವನ ಮಾರ್ಗವಾಗಿ ತೆರಳಿ ಸರ್ಕಾರಿ ಆಸ್ಪತ್ರೆ ಹಿಂಭಾಗದ ಹಂಸಭಾವಿ ರಸ್ತೆ ಕೂಡುವ ರಸ್ತೆಗಳಲ್ಲಿ ಓಡಾಡುವ ಎಲ್ಲ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಸದರಿ ಮಾರ್ಗದ ಬದಲಾಗಿ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಎನ್.ಬಿ.ಬಿ.ಶಾಲೆ ಹಾಗೂ ಬಿಇಎಸ್ ಕಾಲೇಜು ಆವರಣ, ಅಗ್ನಿಶಾಮಕ ರಸ್ತೆ, ಎಪಿಎಂಸಿ ಆವರಣ, ಅಗಸನಹಳ್ಳಿ ಪೆಟ್ರೋಲ್ ಬಂಕ್ ಎದುರು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಸದ್ಭಾವನಾ ಯಾತ್ರೆ: ಪ್ರತಿದಿನ ಬೆಳಗ್ಗೆ 6.30 ಗಂಟೆಗೆ ಕೊಪ್ಪಳದ ಶ್ರೀಗಳ ನೇತೃತ್ವದಲ್ಲಿ ಅಧ್ಯಾತ್ಮ ಪ್ರವಚನ ಪ್ರಯುಕ್ತ ಪಟ್ಟಣದ ವಿವಿಧ ಬಡಾವಣೆ ಹಾಗೂ ಗ್ರಾಮಗಳಲ್ಲಿ ಸದ್ಭಾವನಾ ಪಾದಯಾತ್ರೆ ಜರುಗಲಿದೆ.ನ. 14ರಂದು ಬ್ಯಾಡಗಿ ನಗರದ ಚಂದ್ರಗುತ್ತೆಮ್ಮ ದೇವಿ ದೇವಸ್ಥಾನದಿಂದ ಸದ್ಭಾವನಾ ಪ್ರಾರಂಭವಾಗಿ ಮದಗಮ್ಮನ ದೇವಸ್ಥಾನ, ತಳವಾರ ಓಣಿ, ಹೊಂಡದಓಣಿ, ಸೋಗಿನ ಓಣಿ, ಪೋಸ್ಟ ಆಫೀಸರಸ್ತೆ ಮೂಲಕ ವಾಜಪೇಯಿ ರಂಗಮಂದಿರದಲ್ಲಿ ಮುಕ್ತಾಯವಾಗಲಿದೆ.ನ. 15ರಂದು ಬಸವೇಶ್ವರ ಮೂರ್ತಿಯಿಂದ ಸಂಗಮೇಶ್ವರ ನಗರ, ಅಗಸನಹಳ್ಳಿ ದರ್ಗಾ ಪ್ಲಾಟ್ ಮೂಲಕ ಅಗಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಕ್ತಾಯ.ನ. 16ರಂದು ಇಲ್ಲಿನ ಸ್ವಾತಂತ್ರ್ಯಯೋಧರ ಭವನದಿಂದ ಆರಂಭವಾಗಿ ಸುಭಾಸ ನಗರ ಒಳಭಾಗದ ಮೂಲಕ ತೆರಳಿ ನೆಹರು ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ಮುಕ್ತಾಯ.ನ.17 ರಂದು ವಿದ್ಯಾನಗರ ಪಂಚಲಿಂಗೇಶ್ವರ ದೇವಸ್ಥಾನದಿಂದ ಬೆಟ್ಟದ ಮಲ್ಲೇಶ್ವರ ಮಾರ್ಗವಾಗಿ ಶನೀಶ್ವರ ದೇವಸ್ಥಾನ ಎದುರಿನಿಂದ ಬಿಇಎಸ್ ಕಾಲೇಜು ಆವರಣದಲ್ಲಿ ಮುಕ್ತಾಯವಾಗಲಿದೆ.ನ.18ರಂದು ಕಲ್ಲೆದೇವರು, 19 ಮಲ್ಲೂರು, 20 ಬಿಸಲಹಳ್ಳಿ, 21 ಬುಡಪನಹಳ್ಳಿ, 22ರಂದು ಮಾಸಣಗಿ, 23ರಂದು ಕದರಮಂಡಲಗಿ ಗ್ರಾಮದಲ್ಲಿ ಜರುಗಲಿದೆ, ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಶ್ರೀಗಳ ಪ್ರವಚನ ಆಲಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.