ಸಾರಾಂಶ
ಮುಂಡರಗಿ: ಶ್ರಾವಣ ಶ್ರೇಷ್ಠ, ಆಷಾಢ ಕನಿಷ್ಠ ಎಂಬ ಜನರಲ್ಲಿನ ಮೂಢನಂಬಿಕೆ ಹೊಡೆದೋಡಿಸಲು ಹಿಂದಿನಿಂದಲೂ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದಲ್ಲಿ ಬಸವ ತತ್ವದಡಿಯಲ್ಲಿ ಪ್ರವಚನ ನಡೆಸುತ್ತಾ ಬಂದಿರುವುದು ವಿಶೇಷ, ಅದನ್ನು ಜ.ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಹ ಮುಂದುವರಿಸಿದ್ದಾರೆ ಎಂದು ಗುಳೇದಗುಡ್ಡದ ನೇಕಾರ ಗುರುಪೀಠದ ಗುರುಸಿದ್ದ ಪಟ್ಟದಾರ್ಯ ಮಹಾಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗಿದ ಶರಣ ಚರಿತಾಮೃತ ಪ್ರವಚನದ ಮಂಗಲೋತ್ಸವದ ಸಮ್ಮುಖ ವಹಿಸಿ ಮಾತನಾಡಿದರು. ಮನುಷ್ಯನ ಈ ಶರೀರಕ್ಕೆ ಗ್ಯಾರಂಟಿ, ವಾರಂಟಿ ಯಾವುದೂ ಇಲ್ಲ. ಸಾವು ಬಸವ, ಶ್ರೀಮಂತ, ಸಂತ, ಮಹಾಂತರೆಂದು ಯಾರನ್ನೂ ಬಿಟ್ಟಿಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ಬದುಕಿರುವವರೆಗೂ ಎಲ್ಲರೂ ಒಳ್ಳೆಯ ಕೆಲಸ ಮಾಡಬೇಕು. ಅದನ್ನು ಬಸವಣ್ಣನವರಾದಿಯಾಗಿ ಎಲ್ಲ ಶರಣರು ನಮಗೆ ಕಲಿಸಿ ಹೋಗಿದ್ದಾರೆ ಎಂದರು.ಪ್ರವಚನಕಾರ ಬಸವೇಶ್ವರಿ ಮಾತಾಜಿ ಮಾತನಾಡಿ, ವರ್ತಮಾನದ ಬದುಕನ್ನು ರೂಪಿಸುವ ಮಾನವ ಸಮಾಜದ ಬಿಕ್ಕಟ್ಟಿನಲ್ಲಿ ಎಲ್ಲ ಸಮಾಜ ತನ್ನ ಎತ್ತರಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಯಾರಿಗೆ ಇರುತ್ತದೆಯೋ ಅವರು ಸಾಂಸ್ಕೃತಿಕ ನಾಯಕ ಆಗುತ್ತಾರೆ. ಆ ಎಲ್ಲ ಶಕ್ತಿ ಅಣ್ಣ ಬಸವಣ್ಣನವರಲ್ಲಿದ್ದವು. ನೆಲ ನೆಲದಲ್ಲಿನ ಅಜ್ಞಾನ ತಮ್ಮ ವಚನಗಳ ಮೂಲಕ ಹೊಡೆದೋಡಿಸಿದವರು ಬಸವಣ್ಣನವರು. ಹೀಗಾಗಿ ಸರ್ಕಾರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದರು.
ಇದೇ ಸಂದರ್ಭದಲ್ಲಿ ವಿಜಯ ರತ್ನ ಪ್ರಶಸ್ತಿ ಪಡೆದ ಆನಂದಗೌಡ ಪಾಟೀಲ ಅವರನ್ನು ಗೌರವಿಸಲಾಯಿತು.ಆನಂದಗೌಡ ಪಾಟೀಲರ ಸಾಮಾಜಿಕ ಕಾರ್ಯ ಕುರಿತು ಡಾ. ನಿಂಗು ಸೊಲಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಪ್ರಸ್ತುತ ವರ್ಷದ ಪ್ರವಚನ ಕಾರ್ಯಕ್ರಮ ವಿಶೇಷತೆಗಳಿಂದ ಕೂಡಿದ್ದು, ನೂತನ ಪಲ್ಲಕ್ಕಿ, ವಿಶ್ವಗುರು ಬಸವಣ್ಣ, ಎಡೆಯೂರು ಸಿದ್ದಲಿಂಗೇಶ್ವರ ಪಂಚಲೋಹದ ಮೂರ್ತಿಗಳ ಮೆರವಣಿಗೆ, ಮೂರು ದಿನ ವಿಶೇಷ ಕಾರ್ಯಕ್ರಮ ಜರುಗಿದ್ದು, ಈ ಎಲ್ಲ ಕಾರ್ಯಕ್ರಮ ಯಶಸ್ಸು ಶ್ರೀಮಠದ ಭಕ್ತರದ್ದಾಗಿದೆ ಎಂದರು.
ಬಸಯ್ಯ ಗಿಂಡಿಮಠ ಅಧ್ಯಕ್ಷತೆ ವಹಿಸಿದ್ದರು. ರಾಮಸ್ವಾಮಿ ಹೆಗಡಾಳ, ಡಾ. ಅನ್ನದಾನಿ ಮೇಟಿ, ಡಿ.ಡಿ. ಮೋರನಾಳ, ಹೇಮಂತಗೌಡ ಪಾಟೀಲ, ಡಾ.ವಿ.ಕೆ. ಸಂಕನಗೌಡ್ರ, ಡಾ. ಬಿ.ಎಸ್. ಮೇಟಿ, ರುದ್ರಪ್ಪ ಕುಂಬಾರ, ಫಕೀರಪ್ಪ ಚಲವಾದಿ, ಬಸವಂತಪ್ಪ ಹೊಸಮನಿ, ಭರಮಗೌಡ ನಾಡಗೌಡ್ರ, ಜಯಂತಿಲಾಲ್ ಬನ್ಸಾಲಿ, ನಾಗೇಶ ಕುಬಸದ, ಎ.ವೈ. ನವಲಗುಂದ ಸೇರಿದಂತೆ ಶ್ರೀ ಮಠದ ಭಕ್ತರು ಪಾಲ್ಗೊಂಡಿದ್ದರು. ಕೊಟ್ರೇಶ ಅಂಗಡಿ ಸ್ವಾಗತಿಸಿ, ಡಾ. ನಾಗೇಶ ಅಜ್ಜವಾಡಿಮಠ ಕಾರ್ಯಕ್ರಮ ನಿರೂಪಿಸಿದರು.