ನಾಗರೀಕ ಸಮಾಜಕ್ಕೆ ಸಂದೇಶ ನೀಡುವಂತ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದರೆ ಸೇವಾ ಮನೋಭಾವಕ್ಕೆ ಒಳ್ಳೆಯ ಅರ್ಥ ಮೂಡುತ್ತದೆ ಎಂದು ಸಮಾಜ ಸೇವಕ ರಾಜು ಹಿರಿಯಾವಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಸೊರಬ
ನಾಗರೀಕ ಸಮಾಜಕ್ಕೆ ಸಂದೇಶ ನೀಡುವಂತ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದರೆ ಸೇವಾ ಮನೋಭಾವಕ್ಕೆ ಒಳ್ಳೆಯ ಅರ್ಥ ಮೂಡುತ್ತದೆ ಎಂದು ಸಮಾಜ ಸೇವಕ ರಾಜು ಹಿರಿಯಾವಲಿ ಹೇಳಿದರು.ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಮತ್ತು ಪ್ರಶಸ್ತಿಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಮಾಡುವ ಸೇವೆ ಪ್ರಚಾರಕ್ಕಾಗಿ ನಡೆಯದೇ, ಸಮಾಜದ ಕೆಳಸ್ಥರದಲ್ಲಿ ಬದುಕುತ್ತಿರುವವನ್ನು ಗುರುತಿಸಿ ಸಹಾಯಹಸ್ತ ಚಾಚುವುದರಿಂದ ಒಂದಿಷ್ಟು ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ. ಇಂಥ ಪ್ರಕ್ರಿಯೆಗಳಿಂದ ಸಮಾಜದ ಉನ್ನತಿ ಸಾಧ್ಯವಾಗುತ್ತದೆ. ಇದನ್ನು ಪ್ರತಿಯೊಂದು ಸಂಘ- ಸಂಸ್ಥೆಗಳು ರೂಢಿಸಿಕೊಂಡರೆ ಸಮಾಜವೇ ನಮ್ಮನ್ನು ಗುರ್ತಿಸಿ, ಸನ್ಮಾನಿಸುತ್ತದೆ ಎಂದರು.ವಿಶೇಷಚೇತನವುಳ್ಳ ಮಕ್ಕಳನ್ನು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ನೀಡುವಂತಹ ಪೂರ್ವತಯಾರಿ ಶಿಕ್ಷಕರಿಗೆ ಒಂದು ರೀತಿಯ ದುಸ್ಸಾಹಸವೇ ಸರಿ. ಸಮಾಜದಲ್ಲಿ ಭಿನ್ನತೆಯಿಂದ ಕೂಡಿರುವ ಮಕ್ಕಳು ಸಂಸ್ಥೆಯ ಹಾಗೂ ಶಿಕ್ಷಕರ ತರಬೇತಿಯಿಂದ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತರುವಲ್ಲಿ ಸಂಸ್ಥೆ ಹಾಗೂ ಶಾಲಾ ಶಿಕ್ಷಕರ ಪರಿಶ್ರಮ ಅನನ್ಯವಾಗಿದೆ. ಅಂತಹ ಶಿಕ್ಷಕರು ನಿಜಕ್ಕೂ ಅಭಿನಂದನಾರ್ಹರು. ಸಮಾಜದಲ್ಲಿ ಶ್ರೇಷ್ಠರು ಮತ್ತು ನಿಕೃಷ್ಟರು ಅಂತ ಇರುವುದಿಲ್ಲ. ಶಿಕ್ಷಣ ತರಬೇತಿಯಲ್ಲಿ ಪ್ರೀತಿ- ವಾತ್ಸಲ್ಯ ದೊರಕಿದರೆ ಉತ್ತಮ ಸಾಧಕರು ಉದಯಿಸುತ್ತಾರೆ ಎಂದರು.
ಸಂಸ್ಥೆ ಕಾರ್ಯದರ್ಶಿ ಜಿ.ಬಿ. ರಾಮಪ್ಪ ಮಾತನಾಡಿ, ಶಿಕ್ಷಕರು ಮತ್ತು ಪೋಷಕರ ಬೆಂಬಲ ಹಾಗೂ ಮಕ್ಕಳ ಪರಿಶ್ರಮದಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವಂತಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಜಿ.ಬಿ. ರಾಮಪ್ಪ, ಅತಿಥಿಗಳಾಗಿ ಕನ್ನಡಪ್ರಭ ವರದಿಗಾರ ಎಚ್.ಕೆ.ಬಿ. ಸ್ವಾಮಿ, , ಮುಖ್ಯ ಶಿಕ್ಷಕ ಎಸ್. ರವೀಂದ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪುಟ್ಟರಾಜು, ಶಿಕ್ಷಕಿಯರಾದ ಗಾಯಿತ್ರಿ ನಾಯ್ಕ್, ಮಂಗಳ ಪೂಜಾರ್, ಸುಮಂಗಲ, ಪಲ್ಲವಿ ಹಾಗೂ ಪೋಷಕರಾದ ಉಮೇಶ್, ಚಂದ್ರಪ್ಪ ಮೊದಲಾದವರು ಹಾಜರಿದ್ದರು.
- - -ಸುಸಂಸ್ಕೃತ ಚಟುವಟಿಕೆಗಳು ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮ ದಾರಿ ತೋರುತ್ತದೆ. ಸಮಾಜ ಸೇವಕ ರಾಜು ಹಿರಿಯಾವಲಿ ತಾಲೂಕಿನಾದ್ಯಂತ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಮಾದರಿಯಾಗಿದ್ದಾರೆ. ಅವರ ಈ ರೀತಿಯ ಸಮಾಜದ ಸತ್ಕಾರ್ಯಗಳು ಮುಂದೆಯೂ ನಡೆಯುತ್ತಿರಲಿ.
- ಎಂ.ಎಲ್. ನೋಪಿ ಶಂಕರ್, ಪತ್ರಕರ್ತ