ಸಾರಾಂಶ
ಮಹಾನಗರ ಪಾಲಿಕೆಯಲ್ಲಿ ಖಾತಾ ನಕಲು ಪಡೆಯಲು ಕಳೆದ ಕೆಲವು ದಿನಗಳಿಂದ ಸರ್ವರ್ ಡೌನ್ ಸಮಸ್ಯೆ ಕಾಡುತ್ತಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಹಾನಗರ ಪಾಲಿಕೆಯಲ್ಲಿ ಖಾತಾ ನಕಲು ಪಡೆಯಲು ಕಳೆದ ಕೆಲವು ದಿನಗಳಿಂದ ಸರ್ವರ್ ಡೌನ್ ಸಮಸ್ಯೆ ಕಾಡುತ್ತಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.ಮಹಾನಗರಪಾಲಿಕೆ ಆಡಳಿತ ಹಿತದೃಷ್ಠಿಯಿಂದ ಮೂರು ವಿಭಾಗಗಳನ್ನಾಗಿ ವಿಂಗಡಿಸಿ, ವಿಭಾಗ ಕಚೇರಿ ತೆರೆದು ಅನುಕೂಲ ಮಾಡಿದ್ದರೂ ಸಹ ಇದೀಗ ನಾಲ್ಕು ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ, ಸರ್ವರ್ ಡೌನ್ ಸಮಸ್ಯೆ ಎದ್ದು ಕಾಣುತ್ತಿದ್ದು, ಈ ಖಾತೆ ಮತ್ತು ‘ಬಿ’ ಖಾತಾ ಸಂಬಂಧಿಸಿದಂತೆ ಆಮೆಗತಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಾಲಿಕೆಯ ನಾಡಿಮಿಡಿತ ಬಲ್ಲ ಈ ಹಿಂದೆ ಇಲ್ಲೇ ಕಾರ್ಯನಿರ್ವಹಿಸಿ, ವರ್ಗಾವಣೆಗೊಂಡು ಮತ್ತೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಬಂದ ಮಾಯಣ್ಣಗೌಡರು ಅನೇಕ ಸುಧಾರಣೆಗೆ ಶಕ್ತಿಮೀರಿ ಪ್ರಯತ್ನಿಸುತ್ತಿದ್ದರೂ ಕೂಡ ಸಾರ್ವಜನಿಕರ ಕೆಲಸ-ಕಾರ್ಯಗಳು ಮಾತ್ರ ಅದೇ ಆಮೆ ವೇಗದಲ್ಲಿ ಸಾಗುತ್ತಿದೆ. ಪ್ರಮುಖವಾಗಿ ಕೇಸ್ ವರ್ಕರ್‌ಗಳು ಕೈಗೆ ಸಿಗುತ್ತಿಲ್ಲ. ಆರ್‌ಐಗಳು ಕೂಡ ಕುಂಟುನೆಪ ಹೇಳಿಕೊಂಡು ಸ್ವಸ್ಥಾನದಲ್ಲಿ ಇರುವುದೇ ಇಲ್ಲ. ಇದು ಅನೇಕ ಸಾರ್ವಜನಿಕರ ಅಭಿಪ್ರಾಯ.ತಿಂಗಳ ಅಂತ್ಯದಲ್ಲಿ ಮತ್ತು ಮೊದಲು ಕಂದಾಯ ಕಟ್ಟಲು ಮತ್ತು ಖಾತಾ ನಕಲು ಪಡೆಯಲು ಹಿರಿಯ ನಾಗರೀಕರು ಆದಿಯಾಗಿ ಸಾರ್ವಜನಿಕರು ಕ್ಯೂನಿಲ್ಲುವ ಪರಿಸ್ಥಿತಿ ಇದ್ದು, ಖಾತಾ ನಕಲು ಪಡೆಯಲು 100 ರು. ಚಲನ್ ಕಟ್ಟಲು ಒಂದು ಕಡೆಯಾದರೆ, ಖಾತಾ ನಕಲು ಪಡೆಯಲು ಇನ್ನೊಂದು ಮೂಲೆಯಲ್ಲಿ ನಾಗರೀಕರು ಓಡಾಡುವ ಪರಿಸ್ಥಿತಿಯಿದ್ದು, ಸರ್ವರ್ ಡೌನ್ ಆದರಂತೂ ಹೇಳಲಾಗದ ಪರಿಸ್ಥಿತಿ ಇದೆ. ಒಂದು ಖಾತಾ ನಕಲು ಪಡೆಯಲು ಮೂರು ದಿನ ಓಡಾಡುವ ಪರಿಸ್ಥಿತಿಯೂ ಇದೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಾಲಿಕೆ ಆಯುಕ್ತರು ಕೂಡಲೇ ಆಡಳಿತಾತ್ಮಕ ಸುಧಾರಣೆಯನ್ನು ಮಾಡಬೇಕು. ಕರ್ತವ್ಯದ ಸಮಯ ನಿಗದಿಪಡಿಸಿ, ಬೋರ್ಡ್ ಹಾಕಬೇಕು. ಎಲ್ಲಾ ವಿಭಾಗದ ಎದುರು ದೊಡ್ಡದಾಗಿ ನಾಮಫಲಕ ಮತ್ತು ಅಧಿಕಾರಿಯ ಹೆಸರು ಹಾಗೂ ದೂರವಾಣಿ ಸಂಖ್ಯೆ ಮತ್ತು ಕರ್ತವ್ಯ ಸಮಯದ ಅವಧಿಯನ್ನು ತಿಳಿಯಪಡಿಸಬೇಕು. ಚಲನ್ ಪಡೆದು ಹಣಕಟ್ಟಿ ಖಾತಾ ನಕಲು ನೀಡುವ ಕೌಂಟರ್‌ಗಳನ್ನು ಒಂದೇ ಕಡೆಮಾಡಿ, ಸಿಬ್ಬಂದಿಗಳನ್ನು ಹೆಚ್ಚಿಸಬೇಕು. ಯಾವುದೇ ನಾಗರೀಕರಿಗೆ ಕಾಯುವ ಪರಿಸ್ಥಿತಿ ಬರಬಾರದು. ಆನ್‌ಲೈನ್‌ನಲ್ಲಿ ಖಾತಾ ನಕಲು ಪಡೆಯುವ ವ್ಯವಸ್ಥೆಯನ್ನು ಮಾಡಿ, ಅದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.