ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 30 ಕೊನೆಯ ದಿನಾಂಕ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಧಾರವಾಡ:
ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ಸರ್ವರ್ ಸಮಸ್ಯೆ ಎದುರಾಗಿದ್ದು, ಜಿಲ್ಲೆಯಾದ್ಯಂತ ಪಡಿತರ ಗ್ರಾಹಕರು ಪರದಾಡುವಂತಾಗಿದೆ.ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 30 ಕೊನೆಯ ದಿನಾಂಕ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ವಿಶೇಷವಾಗಿ ಗಣೇಶ ಹಬ್ಬದ ರಜೆಗೆಂದು ಊರಿಗೆ ಬಂದಿರುವವರು ಇ-ಕೆವೈಸಿಗಾಗಿ ಪಡಿತರ ಅಂಗಡಿಗಳ ಎದುರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಾರಗಟ್ಟಲೆ ಅಂಗಡಿ ಎದುರು ಕಾಯುತ್ತಿದ್ದರೂ ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತಿಲ್ಲ. ಇದರಿಂದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇಡೀ ದಿನ ಪಡಿತರ ಅಂಗಡಿಗಳ ಮುಂದೆ ನಿಲ್ಲಬೇಕಾಗಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕೆಲವು ಪಡಿತರ ಅಂಗಡಿಯಲ್ಲಿ ನೂರಾರು ಪಡಿತರ ಚೀಟಿಗಳಿಗೆ ಇ-ಕೆವೈಸಿ ಮಾಡಬೇಕಿದ್ದು, ಸರ್ವರ್ ಸಮಸ್ಯೆಯಿಂದ ಪ್ರತಿದಿನ ಕೆಲವೇ ಸಂಖ್ಯೆಯಲ್ಲಿ ಗ್ರಾಹಕರಿಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ನಿಗದಿತ ಅವಧಿಯಲ್ಲಿ ಎಲ್ಲ ಪಡಿತರ ಚೀಟಿಗಳಿಗೆ ಇ-ಕೆವೈಸಿ ಪೂರ್ಣಗೊಳಿಸುವುದು ಹೇಗೆ ಎಂಬ ಆತಂಕ ಗ್ರಾಹಕರಲ್ಲಿ ಮೂಡಿದೆ.
ಸರ್ವರ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ, ಇ-ಕೆವೈಸಿ ಪ್ರಕ್ರಿಯೆಗೆ ಅಗತ್ಯವಿರುವಷ್ಟು ಸರ್ವರ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಇ-ಕೆವೈಸಿ ಗಡುವನ್ನು ವಿಸ್ತರಿಸಬೇಕು ಎಂದು ಗ್ರಾಹಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.