ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಡಿಜಿಟಲ್ ಯುಗದಲ್ಲಿ ಪ್ರತಿಯೊಂದಕ್ಕೂ ಆನ್‌ಲೈನ್ ಸೇವೆ ನೀಡುತ್ತಿರುವ ಸರ್ಕಾರ ಈಗ ಪಡಿತರ ವಿತರಣೆಗೂ ಆನ್‌ಲೈನ್ ಸೇವೆ ಕಲ್ಪಿಸಿದೆ. ಆದರೆ ಕಳೆದ ೨೦ ದಿನಗಳಿಂದ ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಅಡ್ಡಿಯಾಗಿದ್ದರೂ ಕೇಳುವವರೇ ಇಲ್ಲದಂತಾಗಿದೆ.ಹೌದು ಕಳೆದ ೨೦ದಿನಗಳಿಂದ ತಾಲೂಕಿನಾದ್ಯಂತ ಆಹಾರ ಇಲಾಖೆಯ ಸರ್ವರ್ ಸಮಸ್ಯೆಯಿಂದಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಮಯಕ್ಕೆ ಪಡಿತರ ಧಾನ್ಯಗಳನ್ನು ಪಡೆಯಲಾಗದೆ ನಿತ್ಯ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತರೂ ಪಡಿತರ ಮಾತ್ರ ಸಿಗುತ್ತಿಲ್ಲ.
ಕೂಲಿ ಕಾರ್ಮಿಕರಿಗೆ ತೊಂದರೆಪಡಿತರ ಪಡೆಯಲು ಕೂಲಿ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯುವಂಥ ಶಿಕ್ಷೆ ಪಟ್ಟಣ ಹಾಗೂ ಗ್ರಾಮೀಣ ಪಡಿತರ ಚೀಟಿದಾರರಿಗೆ ಎದುರಾಗಿದೆ. ಸಮಯಕ್ಕೆ ಆಹಾರ ಧಾನ್ಯಗಳನ್ನು ಗೋದಾಮಿನಿಂದ ಎತ್ತುವಳಿ ಮಾಡಿದರೂ ಅದನ್ನು ಸಮಯಕ್ಕೆ ವಿತರಿಸಲು ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ನಿತ್ಯ ಅಂಗಡಿ ಮಾಲೀಕರ ಹಾಗೂ ಪಡಿತರ ಚೀಟಿದಾರರ ನಡುವೆ ಮಾತಿನ ಸಮರಕ್ಕೆ ಎಡೆ ಮಾಡಿಕೊಟ್ಟಿದೆ.
ಯಾವ ಕಾರಣಕ್ಕೆ ಸರ್ವರ್ ಕಾಟ ಕಾಡಲಾರಂಭಿಸಿದೆ ಎಂಬ ಬಗ್ಗೆ ಮಾಹಿತಿ ನೀಡುವವರೇ ಆಹಾರ ಇಲಾಖೆಯಲ್ಲಿ ಇಲ್ಲದಂತಾಗಿದೆ. ನಿತ್ಯ ನ್ಯಾಯಬೆಲೆ ಅಂಗಡಿದಾರರು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೇಳಲು ಮುಂದಾದರೆ ಆ ಕಡೆಯಿಂದ ಯಾವುದೇ ಉತ್ತರ ಸಿಗುತ್ತಿಲ್ಲ. ಕಾರಣ ಕೇಳಿದರೆ ಆಹಾರ ಶಿರಸ್ತೇದಾರ್ ವರ್ಗಾವಣೆಗೊಂಡಿದ್ದಾರೆ, ಅವರ ಜಾಗಕ್ಕೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿದ್ದ ಟಿ. ಮಂಜುನಾಥ್ ಎಂಬುರನ್ನು ವರ್ಗಾಯಿಸಲಾಗಿದೆ. ಅವರಿನ್ನೂ ಅಧಿಕಾರಿ ಸ್ವೀಕರಿಸಬೇಕಿದೆ ಎಂದು ಉತ್ತರಿಸುತ್ತಾರೆ.ನಿವೃತ್ತ ಅಧಿಕಾರಿಗೆ ವರ್ಗಾವಣೆ ಆದೇಶ?
ಆದರೆ ಟಿ. ಮಂಜುನಾಥ್ ಜೂನ್ ತಿಂಗಳಲ್ಲಿ ಈಗಾಗಲೇ ಸೇವೆಯಿಂದ ನಿವೃತ್ತಿ ಹೊಂದಿರುವವರನ್ನು ಹೇಗೆ ವರ್ಗಾಯಿಸಿದರೆಂಬುದು ಎಲ್ಲರ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಈ ತಿಕ್ಕಾಟದಲ್ಲಿ ಇಲ್ಲಿನ ಆಹಾರ ಕಚೇರಿಯಲ್ಲಿ ಆಹಾರ ನಿರೀಕ್ಷಕರೂ ಇಲ್ಲ ಆಹಾರ ಶಿರಸ್ತೇದಾರರೂ ಇಲ್ಲದೆ ಇಲಾಖೆ ಅನಾಥವಾಗಿದೆ. ಇನ್ನು ಸರ್ವರ್ ಬಗ್ಗೆ ಜಿಲ್ಲಾ ಆಹಾರ ಕಚೇರಿಯಿಂದ ಮಾಹಿತಿ ಪಡೆದು ಗ್ರಾಹಕರಿಗೆ ತಿಳಿಸಲು ಯತ್ನಿಸಿದರೂ ಅಲ್ಲಿಂದಲೂ ಸಮರ್ಪಕವಾದ ಉತ್ತರ ಸಿಗುತ್ತಿಲ್ಲ.ಇದರಿಂದಿ ಪಡಿತರ ಚೀಟಿದಾರರು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ಹೈರಾಣಾಗಿದ್ದಾರೆ. ಬೆಳಗ್ಗೆ ೭ಗಂಟೆಯಿಂದಲೇ ಸರ್ವರ್ ಕಲ್ಪಿಸಲಾಗಿದೆ ಎಂದು ಇಲಾಖೆ ಹೇಳುತ್ತದೆ, ಆದರೆ ಯಾವ ಸಮಯಕ್ಕೆ ಸರ್ವರ್ ಆನ್ ಆಗುತ್ತದೆ ಯಾವ ಸಮಯಕ್ಕೆ ಆಫ್ ಆಗುತ್ತದೆ ಎಂಬುದು ದೇವರೇ ಬಲ್ಲ. ತಿಂಗಳ ಅಂತ್ಯಕ್ಕೆ ಇನ್ನು ಕಲವೇ ದಿನಗಳು ಉಳಿದಿರುವಾಗ ಸರ್ವರ್ ಸಮಸ್ಯೆ ಹೀಗೆ ಮುಂದುವರಿದರೆ ಹೇಗಪ್ಪ ಪಡಿತರ ಪಡೆಯೋದು ಎಂಬುದು ಚೀಟಿದಾರರನ್ನು ಕಾಡುತ್ತಿದೆ.