ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಉತ್ತಮ ಸಮಾಜ ಕಟ್ಟುವ ಕೆಲಸವನ್ನು ಆಕಾಶವಾಣಿ ಮಾಡುತ್ತದೆ. ಸರ್ವರನ್ನು ತಲುಪುವ ಏಕೈಕ ಮಾಧ್ಯಮ ಎಂದರೆ ರೇಡಿಯೋ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಭಿಪ್ರಾಯಪಟ್ಟರು. ನಗರದ ಆಕಾಶವಾಣಿ ಕೇಂದ್ರದಲ್ಲಿ ಜರುಗಿದ 27ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಸಿಗೆ ನೀರೆಯುವ ಮೂಲಕ ರೈತವಾಣಿ ಕಾರ್ಯಕ್ರಮದ ನೇರ ಪ್ರಸಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಉತ್ತಮ ಸಮಾಜ ಕಟ್ಟುವ ಕೆಲಸವನ್ನು ಆಕಾಶವಾಣಿ ಮಾಡುತ್ತದೆ. ಸರ್ವರನ್ನು ತಲುಪುವ ಏಕೈಕ ಮಾಧ್ಯಮ ಎಂದರೆ ರೇಡಿಯೋ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಭಿಪ್ರಾಯಪಟ್ಟರು. ನಗರದ ಆಕಾಶವಾಣಿ ಕೇಂದ್ರದಲ್ಲಿ ಜರುಗಿದ 27ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಸಿಗೆ ನೀರೆಯುವ ಮೂಲಕ ರೈತವಾಣಿ ಕಾರ್ಯಕ್ರಮದ ನೇರ ಪ್ರಸಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆಕಾಶವಾಣಿ ನನ್ನ ಬಾಲಮಿತ್ರವಾಗಿದ್ದು, ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ಸಂಗಾತಿಯಾಗಿದೆ. ನನ್ನ ಬದುಕನ್ನು ತಿದ್ದಿಕೊಳ್ಳಲು, ವೃತ್ತಿ ಬದುಕನ್ನು ರೂಪಿಸಿಕೊಳ್ಳಲು ಆಕಾಶವಾಣಿ ಸಹೃದಯ ಸ್ನೇಹಿತನಂತೆ ಜೊತೆಗಿದೆ. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಆಕಾಶವಾಣಿಯ ಪಾತ್ರ ಮಹತ್ವದಾಗಿದೆ. ಆಕಾಶವಾಣಿಗೆ ಒಂದು ಪರಂಪರೆ, ಒಂದು ಸಂಸ್ಕೃತಿ, ಒಂದು ಸಂಸ್ಕಾರ ಇದೆ. ರೇಡಿಯೋ ಜೊತೆಗಿನ ದಶಕಗಳ ಕಾಲದ ತಮ್ಮ ಅವಿನಾಭಾವ ಸಂಬಂಧವನ್ನು ಜಿಲ್ಲಾಧಿಕಾರಿಗಳು ಇದೆ ವೇಳೆ ಮೆಲುಕು ಹಾಕಿದರು.
ಬಹುಜನ ಹಿತಾಯ ಬಹು ಜನ ಸುಖಾಯ ಆಕಾಶವಾಣಿಯ ಘೋಷವಾಕ್ಯವಾಗಿದ್ದು, ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಆಕಾಶವಾಣಿ ಅಚ್ಚುಮೆಚ್ಚಿನ ಮಾಧ್ಯಮವಾಗಿದೆ ಎಂದು ಹೇಳಿದರು.ವೇದಿಕೆಯಲ್ಲಿ ಹಾಸನ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಬಿ.ವಿ.ಶ್ರೀಧರ, ಕಲಬುರಗಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಡಾ.ಸೋಮಶೇಖರ ರುಳಿ, ತಾಂತ್ರಿಕ ವಿಭಾಗದ ಮುಖ್ಯಸ್ಥ ಎಸ್.ಎಸ್.ಶೇಖ, ಆತ್ಮಾ ಯೋಜನೆಯ ಉಪನಿರ್ದೇಶಕ ಡಾ.ಎಂ.ಬಿ.ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಕೇಂದ್ರದ ಹಿರಿಯ ಉದ್ಘೋಷಕ ಎಂ.ಕೆ.ಶಿವಕುಮಾರ ಸ್ವಾಗತಿಸಿ, ನಿರೂಪಿಸಿದರು. ವಿಜಯಪುರ ಕೇಂದ್ರದ ಎಲ್ಲ ಉದ್ಘೋಷಕರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.