ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಮಾಜಮುಖಿ, ಮಾನವೀಯ ಕಾರ್ಯಗಳಿಗೆ ಸದಾ ತುದಿಗಾಲ ಮೇಲೆ ನಿಂತಿರುವ ಲಯನ್ಸ್ ಕ್ಲಬ್ ಮತ್ತು ಅದರ ಅಂಗಸಂಸ್ಥೆಗಳ ಕಾರ್ಯ ಮಾದರಿಯಾಗಿದೆ ಎಂದು ಜಿಲ್ಲಾ ವರದಿಗಾರರ ಕೂಟ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ್ ಶ್ಲಾಘಿಸಿದರು.ನಗರದ ದೇವರಾಜ ಅರಸು ಬಡಾವಣೆಯ ಲಯನ್ಸ್ ಕ್ಲಬ್‌ನಿಂದ ಲಯನ್ಸ್ ಭವನದಲ್ಲಿ ಭಾನುವಾರ ವರದಿಗಾರರ ಕೂಟ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದೆಲ್ಲಾ ಲಯನ್ಸ್ ಕ್ಲಬ್‌ನ ಸಭೆ, ಸಮಾರಂಭ ಎಂದರೆ ಸಭಾಂಗಣದ ತುಂಬಿ ತುಳುಕುವಷ್ಟು ಸದಸ್ಯರು ಇರುತ್ತಿದ್ದುದನ್ನು ಪತ್ರಕರ್ತನಾಗಿ ಆರಂಭದಲ್ಲಿ ನಾವು ಕಂಡಿದ್ದೇವೆ ಎಂದರು.
ಪತ್ರಿಕೋದ್ಯಮಕ್ಕೆ ಹಿರಿಯರಾದ ದಿವಂಗತ ಸಿ.ಕೇಶವಮೂರ್ತಿ ನೀಡಿರುವ ಕೊಡುಗೆ ಅಪಾರ. ಜಿಲ್ಲಾಮಟ್ಟದ ಪತ್ರಿಕೆಯಲ್ಲಿ ನೂರಾರು ಪತ್ರಕರ್ತರಿಗೆ ಉದ್ಯೋಗ ನೀಡುವ ಮೂಲಕ ಇಂದು ರಾಜ್ಯ, ರಾಷ್ಟ್ರದ ಸುದ್ದಿ ಮಾಧ್ಯಮಗಳಲ್ಲಿ, ಸಂಸ್ಥೆಗಳಲ್ಲಿ ಅನೇಕರು ಕೆಲಸ ಮಾಡುತ್ತಿದ್ದಾರೆ. ನಗರವಾಣಿ ಪತ್ರಕರ್ತರನ್ನು ತಯಾರು ಮಾಡುವ ಕೇಂದ್ರವಾಗಿ ಇಂದಿಗೂ ಮುಂದುವರಿಯುತ್ತಿದೆ. ಇದಕ್ಕೆ ಕೇಶವಮೂರ್ತಿ ಅವರ ಕೊಡುಗೆ ಅವಿಸ್ಮರಣೀಯ ಎಂದು ಸ್ಮರಿಸಿದರು.ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಲಯನ್ಸ್ ಕ್ಲಬ್‌ನ ಅಂಗ ಸಂಸ್ಥೆಗಳಲ್ಲಿ ನಾಲ್ಕು ದಶಕಗಳ ಒಡನಾಟ ತಮ್ಮದಾಗಿದೆ. ಸಮಾಜಮುಖಿ ಕಾರ್ಯಗಳು, ಮಾನವೀಯ ಕೆಲಸಗಳಲ್ಲಿ ಲಯನ್ಸ್ ಸಂಸ್ಥೆ ಸದಾ ಒಂದು ಹೆಜ್ಜೆ ಮುಂದಿರುತ್ತದೆ. ಸಂಸ್ಥೆಯಲ್ಲಿ ಕಿರಿಯರಿಂದ ಹಿರಿಯವರೆಗೆ ವಿವಿಧ ಕ್ಷೇತ್ರಗಳ ಸದಸ್ಯರು, ಪದಾಧಿಕಾರಿಗಳಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕೆಲಸವನ್ನು ಲಯನ್ಸ್ ಸಂಸ್ಥೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿಗಾರರ ಕೂಟ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಮಾತನಾಡಿ, ವರ್ಷದ 363 ದಿನ ಕಾರ್ಯನಿರ್ವಹಿಸುವ ಮಾಧ್ಯಮದವರು ಎಲ್ಲರ ಕಷ್ಟ, ಸುಖಗಳಿಗೆ ಧ್ವನಿಯಾಗುತ್ತಾರೆ. ಆದರೆ, ಎಲ್ಲರೂ ಅಂದುಕೊಂಡಂತೆ ಪತ್ರಕರ್ತರ ಬದುಕು, ಜೀವನ ಹೂವಿನ ಹಾಸಿಗೆಯಲ್ಲ. ಸಮಾಜದಲ್ಲಿ ಈ ವೃತ್ತಿಗೆ ಗೌರವ ಇದೆ. ಆದರೆ, ಪ್ರಾಮಾಣಿಕವಾಗಿ ದುಡಿಯುವ ಪತ್ರಕರ್ತರ ಬದುಕು ಎಲ್ಲರೂ ಅಂದುಕೊಂಡಷ್ಟು ಸುಖದಾಯಕವಾಗಿಲ್ಲ. ವರದಿಗಾರರ ಕೂಟವು ನಮ್ಮೆಲ್ಲಾ ಪತ್ರಕರ್ತರ ಹಿತಕಾಯುವ ಸದುದ್ದೇಶದಿಂದ ಸ್ಥಾಪನೆಯಾಗಿದ್ದು, ಅದಕ್ಕೆ ತಾವೆಲ್ಲರೂ ಬದ್ಧರಿದ್ದೇವೆ ಎಂದು ಹೇಳಿದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಲಿಯೋ ಸದಸ್ಯ, ಅಧ್ಯಕ್ಷನಾಗಿ, ಲಯನ್ಸ್ ಕ್ಲಬ್ ಅಧ್ಯಕ್ಷನಾಗುವವರೆಗೂ ಸಾಕಷ್ಟು ಮನಸ್ಸಿಗೆ ತೃಪ್ತಿ ನೀಡುವ ಕೆಲಸ ಮಾಡುತ್ತಾ ಬಂದಿದ್ದೇವೆ. ಇದೀಗ ಪತ್ರಕರ್ತರ ಸಂಘದ ಅಧ್ಯಕ್ಷನಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ಪ್ರಕೃತಿ ವಿಕೋಪ, ಅತಿವೃಷ್ಟಿ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸೇರಿದಂತೆ ಇದರ ಅಂಗಸಂಸ್ಥೆಗಳ ಸೇವೆ ಅವಿಸ್ಮರಣೀಯವಾದುದು ಎಂದು ಶ್ಲಾಘಿಸಿದರು.
ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯರಾದ ಡಾ. ಬಿ.ಎಸ್. ನಾಗಪ್ರಕಾಶ ಮಾತನಾಡಿ, ಈಚೆಗೆ ಕೇರಳದ ವಯನಾಡು ಇತರೆಡೆ ತಾವು ಭೇಟಿ ನೀಡಿದಾಗ ಇದ್ದ ಊರು, ಮನೆ, ಪರಿಸರವೇ ಇಲ್ಲದಂತಾಗಿದೆ. ಪ್ರಕೃತಿ ಮುನಿದು ಎಲ್ಲವನ್ನೂ ಮಗುಚಿ ಹಾಕಿದೆ. ಇಂತಹ ಸಂಕಷ್ಟದಲ್ಲಿರುವ ಜನ, ಪ್ರದೇಶಕ್ಕೆ ಸುಮಾರು ₹13 ಕೋಟಿ ನೆರವು ಲಯನ್ಸ್ ಸಂಸ್ಥೆ ನೀಡಿ, ಮಾನವೀಯತೆ ಮೆರೆದಿದೆ. ಮನುಷ್ಯ ಎಷ್ಟೇ ಜ್ಞಾನಯಾದರೂ, ಅಭಿವೃದ್ಧಿ ಹೊಂದಿದರೂ ಪ್ರಕೃತಿಯ ಮುಂದೆ ಏನೂ ಅಲ್ಲವೆಂಬುದನ್ನು ಅಲ್ಲಿನ ಘಟನೆಗಳು ಎಚ್ಚರಿಸುವಂತಿದ್ದವು ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳವಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮಹಾಂತೇಶ ವಿ. ಒಣರೊಟ್ಟಿ, ಕಾರ್ಯದರ್ಶಿ ಅಜಯ್ ನಾರಾಯಣ, ವಾಸುದೇವ ರಾಯ್ಕರ್, ಖಜಾಂಚಿ ಎಸ್.ನಾಗರಾಜ, ಸಹ ಖಜಾಂಚಿ ಎಚ್.ಎಂ. ನಾಗರಾಜ ಇತರರು ಇದ್ದರು.