ಸಾರಾಂಶ
ಮುಂಡರಗಿ: ನರೇಗಾ ನೌಕರರು ಸೇವಾ ಭದ್ರತೆ, ವೇತನ ಪಾವತಿ, ಆರೋಗ್ಯ ವಿಮೆಗಾಗಿ ಆಗ್ರಹಿಸಿ ನಡೆಸುತ್ತಿರುವ ಅಸಹಕಾರ ಚಳವಳಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಕ್ಕೆ ನನ್ನ ಸಂಪೂರ್ಣ ನೈತಿಕ ಬೆಂಬಲವಿದೆ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಅವರು ಮಂಗಳವಾರ ಮುಂಡರಗಿ ತಾಪಂ ಆವರಣದಲ್ಲಿ ನಡೆದಿರುವ ನರೇಗಾ ನೌಕರರ ಅಸಹಕಾರ ಚಳವಳಿ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಬೆಂಬಲಿಸಿ ಮಾತನಾಡಿದರು.ನರೇಗಾ ಯೋಜನೆ ಭಾರತದ ಗ್ರಾಮೀಣ ಭಾಗದಲ್ಲಿ ಕಟ್ಟುನಿಟ್ಟಿನ ಆರ್ಥಿಕ ಸುಸ್ಥಿರತೆಗೂ ಕಾರಣವಾಗಿದೆ. ಆರಂಭವಾದಾಗಿನಿಂದಲೂ ನರೇಗಾ ಯೋಜನೆಗೆ ಉತ್ತಮ ಹಿನ್ನೆಲೆಯಿದ್ದು, ಗುಳೆ ಹೋಗುವುದನ್ನು ತಪ್ಪಿಸುವುದರ ಜತೆಗೆ, ಕೃಷಿ ಉನ್ನತೀಕರಣಗೊಳಿಸುವ ಉದಾತ್ತ ವಿಚಾರ ಇದರ ಹಿಂದಿದೆ.
ಕೇಂದ್ರ ಸರಕಾರದ ನಿಯಮಗಳಡಿ ನರೇಗಾ ಸಿಬ್ಬಂದಿಗಳಿಗೆ ಆರೋಗ್ಯ ವಿಮೆ, ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಬೇಕು. 15-20 ವರ್ಷಗಳಿಂದ ಕೆಲಸ ಮಾಡಿದವರಿಗೆ ಸಂವಿಧಾನದ ತಿದ್ದುಪಡಿ ಅನುಸಾರವಾಗಿ ಉದ್ಯೋಗ ಒದಗಿರುವುದರಿಂದ ನರೇಗಾ ಸಿಬ್ಬಂದಿಗಳಿಗೆ ದೈನಂದಿನ ಜೀವನಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟ ತಾಲೂಕು ಘಟಕದ ಅಧ್ಯಕ್ಷ ಯಲ್ಲಪ್ಪಗೌಡ್ರ ಕರಮುಡಿ ಅವರು ಚಳುವಳಿಗೆ ಬೆಂಬಲ ಸೂಚಿಸಿ ಮಾತನಾಡಿ, ನರೇಗಾ ಸಿಬ್ಬಂದಿಗಳದ್ದು ಹೆಚ್ಚು ಫೀಲ್ಡ್ ವರ್ಕ್ ಕೆಲಸ. ಅಂತಹ ಸಿಬ್ಬಂದಿಗಳಿಗೆ ವೇತನ ವಿಳಂಬವಾದರೆ ನರೇಗಾ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ತೊಂದರೆಯಾಗಲಿದೆ. ಆದಷ್ಟು ಬೇಗ ನರೇಗಾ ಸಿಬ್ಬಂದಿಗಳ ಹೋರಾಟಕ್ಕೆ ಉತ್ತಮ ಸ್ಪಂದನೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ದೊರಕಲಿ ಎಂದರು.ಈ ವೇಳೆ ಮಹ್ಮದರಫಿ ವಡ್ಡಟ್ಟಿ, ಸುರೇಶ ನಾಯ್ಕರ್, ತಾಪಂ ಸಿಬ್ಬಂದಿ ಎ.ಜಗದೀಶ, ಗವಿಸಿದ್ದಪ್ಪ ಮಡಿವಾಳರ, ಶರಣು ಗಿರಣಿ, ಎಚ್.ಎಂ.ಕಾತರಕಿ, ಅಶೋಕ ಅಣ್ಣಿಗೇರಿ, ಮಹೇಶ ಜಕ್ಕಲಿ, ನರೇಗಾ ಸಿಬ್ಬಂದಿ ಪ್ರವೀಣ ಸೂಡಿ, ಸಿದ್ದಪ್ಪ ಗುಡಿಮನಿ, ಸುರೇಶ ಬಳ್ಳಾರಿ, ವೆಂಕಟೇಶ ಹಾಣಾಪೂರ, ಮಹೇಶ ಇದ್ಲಿ, ಗೋಪಾಲ ಹೊಸಮನಿ, ಲಕ್ಷ್ಮಣ ಜಮಾದಾರ, ಅಭಿಷೇಕ್, ಬಿಎಫ್ ಟಿ ಗಳಾದ ಲಕ್ಷ್ಮಣ ಹೊಸಕುರುಬರ, ಶಂಭಯ್ಯ ಡಂಬಳಮಠ, ಬೀರಪ್ಪ ಮರೇಗೌಡ್ರ, ರಮೇಶ ಪಾಳೆಗಾರ, ಫಕೀರಪ್ಪ ಹಾರೋಗೇರಿ ಉಪಸ್ಥಿತರಿದ್ದರು.