ಗದಗ: ವೈದ್ಯ ವೃತ್ತಿಯ ಉದ್ದೇಶ ಕೇವಲ ಉದ್ಯೋಗ ಅಥವಾ ಸಂಪಾದನೆಯಲ್ಲ. ಮಾನವ ಸೇವೆ, ಕರುಣೆ ಮತ್ತು ನೈತಿಕತೆಯೊಂದಿಗೆ ಸಮಾಜದ ಆರೋಗ್ಯ ಕಾಪಾಡುವುದೇ ವೈದ್ಯರ ಶ್ರೇಷ್ಠ ಕರ್ತವ್ಯ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.
ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಭಗವಾನ್ ಮಹಾವೀರ ಜೈನ್ ಆಯುರ್ವೇದ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ನಡೆದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿ, ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಜ್ಞಾನದೊಂದಿಗೆ ಜವಾಬ್ದಾರಿ ಮತ್ತು ಮಾನವಸೇವೆಯ ಸಂಕಲ್ಪವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಭಾರತೀಯ ಸಂಸ್ಕೃತಿಯಲ್ಲಿ ವೈದ್ಯರನ್ನು ದೇವರ ಸ್ವರೂಪವೆಂದು ಪರಿಗಣಿಸಲಾಗಿದ್ದು, ಆಚಾರ್ಯ ಚರಕರೂ ವೈದ್ಯ ವೃತ್ತಿಯ ಉದ್ದೇಶ ಸ್ವಾರ್ಥ, ಧನ ಅಥವಾ ಯಶಸ್ಸಲ್ಲ, ಪ್ರಾಣಿಗಳ ಮೇಲಿನ ಕರುಣೆ ಮತ್ತು ಸೇವೆ ಎಂದು ಹೇಳಿದ್ದಾರೆ.
ಆಯುರ್ವೇದವು ವಿಶ್ವದ ಅತ್ಯಂತ ಪ್ರಾಚೀನ ಹಾಗೂ ವೈಜ್ಞಾನಿಕ ಚಿಕಿತ್ಸಾ ಪದ್ಧತಿಗಳಲ್ಲಿ ಒಂದಾಗಿದ್ದು, ದೇಹ, ಮನಸ್ಸು, ಆತ್ಮ ಮತ್ತು ಪ್ರಕೃತಿಯ ಸಮತೋಲನದ ಮೇಲೆ ಆರೋಗ್ಯ ಅವಲಂಬಿತವಾಗಿದೆ. ಆಧುನಿಕ ಜೀವನಶೈಲಿಯಿಂದ ಉಂಟಾಗುತ್ತಿರುವ ಮಧುಮೇಹ, ರಕ್ತದೊತ್ತಡ, ಬೊಜ್ಜು, ಮಾನಸಿಕ ಒತ್ತಡ ಸೇರಿದಂತೆ ಅನೇಕ ಕಾಯಿಲೆಗಳ ನಿಯಂತ್ರಣದಲ್ಲಿ ಆಯುರ್ವೇದದ ಪಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಪರಂಪರೆಯ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಜಿನೋಮಿಕ್ಸ್, ಡಿಜಿಟಲ್ ಹೆಲ್ತ್, ಟೆಲಿಮೆಡಿಸಿನ್ ಹಾಗೂ ಆಧುನಿಕ ರೋಗನಿರ್ಣಯ ತಂತ್ರಜ್ಞಾನಗಳನ್ನು ಆಯುರ್ವೇದ ಶಿಕ್ಷಣ ಮತ್ತು ಸಂಶೋಧನೆಗೆ ಅಳವಡಿಸಿಕೊಳ್ಳಬೇಕು.
ಆಯುರ್ವೇದ ಔಷಧಿಗಳ ಕುರಿತು ವೈಜ್ಞಾನಿಕ ಸಂಶೋಧನೆ, ಕ್ಲಿನಿಕಲ್ ಅಧ್ಯಯನ, ಗುಣಮಟ್ಟ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಭಾರತೀಯ ಚಿಕಿತ್ಸಾ ಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ವೈಜ್ಞಾನಿಕ ಸಾಕ್ಷ್ಯಾಧಾರಗಳೊಂದಿಗೆ ಪರಿಚಯಿಸಬೇಕಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆಯುಷ್ ಸಚಿವಾಲಯ ರಾಷ್ಟ್ರೀಯ ಆಯುಷ್ ಮಿಷನ್, ಆಯುಷ್ಮಾನ್ ಭಾರತ್, ಡಿಜಿಟಲ್ ಹೆಲ್ತ್ ಮಿಷನ್ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ 2020 ಮೂಲಕ ಭಾರತೀಯ ವೈದ್ಯಕೀಯ ಪದ್ಧತಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.
ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಜ್ಞಾನ, ಕೌಶಲ್ಯ, ಸಂಶೋಧನಾ ಮನೋಭಾವ, ನೈತಿಕತೆ ಮತ್ತು ಕರುಣೆಯನ್ನು ತಮ್ಮ ವೃತ್ತಿ ಜೀವನದ ಆಧಾರವಾಗಿಸಿಕೊಳ್ಳಬೇಕು. ಸಮಾಜದ ವಿಶ್ವಾಸ ಗಳಿಸಿ, ಮಾನವ ಸೇವೆಯ ಮೂಲಕ ರಾಷ್ಟ್ರದ ಗೌರವ ಹೆಚ್ಚಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅಶೋಕುಮಾರ ಬಾಗಮಾರ ಮಾತನಾಡಿ, ಥಾವರ್ ಚಂದ್ ಗೆಹಲೋತ್ 3 ಬಾರಿ ಶಾಸಕರಾಗಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ 4 ಬಾರಿ ಲೋಕಸಭಾ ಸದಸ್ಯ, 2 ಬಾರಿ ರಾಜ್ಯಸಭಾ ಸದಸ್ಯರಾಗಿ, ಕೇಂದ್ರದ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ ಎಂದರು.
ಕಾರ್ಯದರ್ಶಿ ಅಜೀತಕುಮಾರ ಬಾಗಮಾರ ಸಂಸ್ಥೆಯ ಬಗ್ಗೆ ತಿಳಿಸಿದರು. ಸಂದೀಪ ಖಿಂವರಸಾ, ತಾರಾಬಾಯಿ ಬಾಗಮಾರ, ವರ್ಧಮಾನ ಬಾಗಮಾರ ಪಾಲ್ಗೊಂಡಿದ್ದರು. ಪ್ರಾಚಾರ್ಯ ಡಾ. ನಾರಾಯಣರಾವ್ ಕುಲಕರ್ಣಿ ಕಾಲೇಜಿನ ವಿವರ ಮಂಡಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು.