ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಯುದ್ಧವು ಕೇವಲ ನೆಲದ ಮೇಲೆ ನಡೆಯುತ್ತಿಲ್ಲ, ಅದು ತಾಂತ್ರಿಕತೆಯೊಂದಿಗೆ ನಡೆಯುತ್ತಿದೆ. ದೇಶದ ಸೇವೆ ಮಾಡಲು ಕೇವಲ ರೈಫಲ್ (ಬಂದೂಕು) ಹಿಡಿಯಬೇಕಾದ ಅಗತ್ಯವಿಲ್ಲ. ದೇಶದ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನಾವು ಇರುವ ಸ್ಥಾನದಲ್ಲೇ ಇದ್ದುಕೊಂಡು ದೇಶದ ಸೇವೆ ಮಾಡಬಹುದು ಎಂದು 18 ಕರ್ನಾಟಕ ಬೆಟಾಲಿಯನ್ ಮಂಗಳೂರಿನ ಕಮಾಂಡಿಂಗ್ ಆಫೀಸರ್ ಆದ ಲೆಫ್ಟಿನೆಂಟ್ ಕರ್ನಲ್ ರೋಹಿತ್ ಪ್ರಕಾಶ್ ಹೇಳಿದ್ದಾರೆ.ಇಲ್ಲಿನ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ವಿಶೇಷ ಎನ್‌ಡಿಎ ಬ್ಯಾಚ್ ವಿದ್ಯಾರ್ಥಿಗಳಿಗಾಗಿ ದಿಗ್ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ಲಸ್ ಟು ನಂತರ ರಕ್ಷಣಾ ಸೇವೆಗೆ ಸೇರಲು ಇರುವ ತಾಂತ್ರಿಕ ಪ್ರವೇಶ ಯೋಜನೆ ಮತ್ತು ವಿವಿಧ ಪ್ರವೇಶ ಯೋಜನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಎಕ್ಸೆಲ್ ಪಿಯು ಕಾಲೇಜಿನ ಎನ್‌ಡಿಎ ಬ್ಯಾಚ್ ವಿದ್ಯಾರ್ಥಿಗಳ ಜ್ಞಾನ ಮತ್ತು ಆಸಕ್ತಿಯನ್ನು ಕಂಡು ಅವರು ಪ್ರಶಂಸೆ ವ್ಯಕ್ತಪಡಿಸಿದರು. ಎಕ್ಸೆಲ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಎನ್‌ಡಿಎ ಮತ್ತು ಎಸ್‌ಎಸ್‌ಬಿ ಸಂದರ್ಶನ ಎರಡಕ್ಕೂ ಅತ್ಯುತ್ತಮ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡಲಾಗುತ್ತಿದೆ.

ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಮಾತನಾಡಿ, ಹತ್ತಾರು ಅವಕಾಶಗಳ ತ್ಯಜಿಸಿ ದೇಶ ಸೇವೆಗೆ ತೊಡಗುವ ಭಾರತೀಯ ಸೈನಿಕರ ಹಿರಿತನಕ್ಕೆ ಗೌರವ ಸಲ್ಲಬೇಕು ಎಂದರು. ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಚಾರ್ಯ ಡಾ ಪ್ರಜ್ವಲ್ ಕಜೆ ಉಪಸ್ಥಿತರಿದ್ದರು. ಎನ್ ಡಿ ಎ ಸಂಯೋಜಕ ಜೋಸ್ಟಮ್ ಎ ಟಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಸಹನಾ ವಂದಿಸಿದರು.ಎಸ್‌ಡಿಎಂ ಆರ್ಮಿ ಯೂನಿಟ್‌ನ ಮಾಜಿ ಎನ್‌ಸಿಸಿ ಕೆಡೆಟ್ ಶ್ರೀಮಂತ್ ಎಕ್ಸೆಲ್ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಅವರು ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಎನ್‌ಡಿಎ ಬ್ಯಾಚ್‌ನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.