ವ್ಯವಸ್ಥೆಯಲ್ಲಿ ಪ್ರಕ್ರಿಯೆ ನಡೆಯದೇ ಇದ್ದರೆ ಜಡತ್ವ ನಿರ್ಮಾಣವಾಗುತ್ತದೆ. ಸೌಹಾರ್ದ ಕಾಯಿದೆ ಬಂದ ಮೇಲೆ ಜಡತ್ವದಿಂದ ಆಚೆಗೆ ಹೊಸ ತಲೆಮಾರಿನ ಜನರನ್ನು ತರಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಸಹಕಾರಿಗಳಿಗೆ ವಿಷಯಾಧಾರಿತ ತರಬೇತಿ ಬೇಕು, ಸಕ್ರಿಯ ಚಳವಳಿ ಇರುವವರು ತಿಳಿದುಕೊಂಡು ಕೆಲಸ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಸೌಹಾರ್ದ ಸಹಕಾರಿಗಳು ಹೊಸತನಕ್ಕೆ ತೆರೆದುಕೊಳ್ಳುತ್ತಿದ್ದು, ಸಮ ಸಮಾಜ ನಿರ್ಮಾಣಕ್ಕೆ ಸೌಹಾರ್ದ ಸಂಘಗಳ ಸೇವೆ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ತಿಳಿಸಿದರು.ನಗರದ ಗುರು ರೆಸಿಡೆನ್ಸಿ ಹೊಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತವು ಗುರುವಾರ ಆಯೋಜಿಸಿದ್ದ ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯ ಸೌಹಾರ್ದ ಸಹಕಾರಿಗಳೊಂದಿಗೆ ಸಂಪರ್ಕ ಸಭೆ ಮತ್ತು ವಿಷಯಾಧಾರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯವಸ್ಥೆಯಲ್ಲಿ ಪ್ರಕ್ರಿಯೆ ನಡೆಯದೇ ಇದ್ದರೆ ಜಡತ್ವ ನಿರ್ಮಾಣವಾಗುತ್ತದೆ. ಸೌಹಾರ್ದ ಕಾಯಿದೆ ಬಂದ ಮೇಲೆ ಜಡತ್ವದಿಂದ ಆಚೆಗೆ ಹೊಸ ತಲೆಮಾರಿನ ಜನರನ್ನು ತರಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಸಹಕಾರಿಗಳಿಗೆ ವಿಷಯಾಧಾರಿತ ತರಬೇತಿ ಬೇಕು, ಸಕ್ರಿಯ ಚಳವಳಿ ಇರುವವರು ತಿಳಿದುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.ಸಹಕಾರ ಸಂಘದ ನಿರ್ದೇಶಕರಾಗಿ ಕೆಲಸ ಮಾಡಿರುವವರಿಗೆ ಕಾನೂನಾತ್ಮಕ ಅಂಶಗಳನ್ನು ಕೇಳಿದರೆ ಸ್ಪಷ್ಟತೆ ಸಾಧ್ಯವಿಲ್ಲ. ಯಾಕೆಂದರೆ ತೊಡಗಿಸಿಕೊಳ್ಳುವುದು ಬಹಳ ಕಡಿಮೆ ಇದೆ. ಸಿಇಒ, ಆಡಿಟ್, ಸಾಮಾನ್ಯ ಸಭೆ, ನಡೆಯುತ್ತಿದೆ. 40 ವರ್ಷವಾದರೂ ಅದರ ಬಗ್ಗೆ ಸಂಪೂರ್ಣವಾಗಿ ಜ್ಞಾನಗಳಿಸುವುದಿಲ್ಲ ಎಂದರು.
ಸೌಹಾರ್ದದಲ್ಲಿ ಸದಸ್ಯರು ಸ್ವಯಂಸೇವಕರಂತೆ ಕಾರ್ಯಕ್ರಮಕ್ಕೆ ಬರುತ್ತಾರೆ, ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಆಸಕ್ತಿ ತೋರುತ್ತಾರೆ. ಹೊಸ ವಿಚಾರಗಳು, ಕಾಯಿದೆ ಬದಲಾವಣೆಗಳು, ಚುನಾವಣೆ, ಲೆಕ್ಕ ಪತ್ರ, ವಾರ್ಷಿಕ ಲೆಕ್ಕಪತ್ರ ಎಲ್ಲವನ್ನು ತಿಳಿಸುವ ಕೆಲಸವನ್ನು ನಿರಂತರವಾಗಿ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ ವೃತ್ತಿಪರ ನಿರ್ದೇಶಕ ಬಿ. ಮಹದೇವಸ್ವಾಮಿ ಮಾತನಾಡಿ, ಸೌಹಾರ್ದ ಸಂಘಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ತೆಗೆದುಕೊಂಡು ಹೋಗಬೇಕು. ಈ ಮೂಲಕ ಜನರ ಅಭಿವೃದ್ದಿಗಾಗಿ ಸಂಘಗಳನ್ನು ಬೆಳಸಬೇಕು. ಪ್ರತಿ ಜಿಲ್ಲೆಯಲ್ಲಿ ಸಹಕಾರಿಗಳ ಸಂಪರ್ಕ ಸಭೆ ಮಾಡುವುದರಿಂದ ಸೌಹಾರ್ದ ಜ್ಞಾನ ಬೆಳೆಯಲಿದೆ ಎಂದರು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿ. ನಂಜನಗೌಡ ಉದ್ಘಾಟಿಸಿದರು. ನಿರ್ದೇಶಕ ಎಸ್.ಕೆ. ಮಂಜುನಾಥ್, ಮೈಸೂರು, ಮಂಡ್ಯ, ಕೊಡಗು ಜಿಲ್ಲೆ ಸೌಹಾರ್ದ ಸಹಕಾರಿಗಳ ಒಕ್ಕೂಟ ಅಧ್ಯಕ್ಷ ಎಸ್.ಆರ್. ನಾರಾಯಣರಾವ್, ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಬಿ.ಟಿ. ಗುರುರಾಜ್, ಜಗದೀಶ್, ಗುರುಪ್ರಸಾದ್ ಮೊದಲಾದವರು ಇದ್ದರು.