ಶಿಕ್ಷಕರಾಗಿ ಸೇವೆ ಸಲ್ಲಿಸುವುದು ತೃಪ್ತಿಕರ ವೃತ್ತಿ

| Published : Oct 29 2024, 12:49 AM IST

ಸಾರಾಂಶ

ಚಿತ್ರದುರ್ಗ: ಶಿಕ್ಷಕರು ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದಲ್ಲಿ ಮಾತೃಭಾವನೆಯಿಂದ ಬೋಧಿಸಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ಚಿತ್ರದುರ್ಗ: ಶಿಕ್ಷಕರು ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದಲ್ಲಿ ಮಾತೃಭಾವನೆಯಿಂದ ಬೋಧಿಸಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಜಿಲ್ಲೆಯ ಪೂರ್ವ ಪ್ರಾಥಮಿಕ (ಎಲ್‌ಕೆಜಿ ಮತ್ತು ಯುಕೆಜಿ) ಶಾಲಾ ಶಿಕ್ಷಕರಿಗೆ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರಾಗಿ ಸೇವೆ ಸಲ್ಲಿಸುವುದು ತೃಪ್ತಿಕರ ವೃತ್ತಿಯಾಗಿದೆ. ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳ ಮನಸ್ಸು ಬಿಳಿ ಹಾಳೆಯಂತೆ ಶುಭ್ರವಾಗಿರುತ್ತದೆ. ಈ ಹಂತದ ತರಗತಿ ನಿರ್ವಹಣೆಯಲ್ಲಿ ಬೋಧಿಸುವ ಶಿಕ್ಷಕರು ತಾಯಿಯ ಸ್ಥಾನ ತುಂಬುವುದರ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬೇಕು ಎಂದು ತಿಳಿಸಿದರು. ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ವೆಂಕಟೇಶಪ್ಪ ಮಾತನಾಡಿ, ಪೂರ್ವ ಪ್ರಾಥಮಿಕ ಶಿಕ್ಷಣ ಔಪಚಾರಿಕ ಶಿಕ್ಷಣಕ್ಕೆ ಸಿದ್ಧಗೊಳಿಸುವ ಹಂತವಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಿಸಲಾಗಿದೆ. ದೇಶದ ಅಭಿವೃದ್ಧಿಯಲ್ಲಿ ಮಾನವ ಸಂಪತ್ತು ಬಹಳ ಮುಖ್ಯ. ಮಕ್ಕಳ ಬಾಲ್ಯವನ್ನು ಸದೃಢಗೊಳಿಸಲು ಶಿಕ್ಷಕರ ಪಾತ್ರ ಪೂರಕವಾಗಿದೆ. ಮಗು ವಿಶ್ವದ ಸಂಪತ್ತಾಗಿ ಬೆಳೆಯುವಂತೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು. ನೋಡಲ್ ಅಧಿಕಾರಿ ಯು.ಸಿದ್ದೇಶಿ, ಉಪನ್ಯಾಸಕ ಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಿಕಾರ್ಜುನಗೌಡ.ಎಸ್ ಪಾಟೀಲ, ಕುಸುಮಾ, ಉಷಾದೇವಿ, ತಾಂತ್ರಿಕ ಸಹಾಯಕರಾದ ಆರ್.ಲಿಂಗರಾಜು, ಅವಿನಾಶ್ ಮತ್ತು ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರು ಇದ್ದರು.