ಸಾರಾಂಶ
ಗ್ರಾಮೀಣ ಜನರ ಆರ್ಥಿಕತೆ ಹೆಚ್ಚಿಸುವಲ್ಲಿ ಹಾಗೂ ರೈತರ ಜೀವನ ಮಟ್ಟ ಸುಧಾರಣೆಯಲ್ಲಿ ಪಶುಸಂಗೋಪನೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಇಂತಹ ರಂಗದಲ್ಲಿ ಪಶು ವೈದ್ಯರಾಗಿ ಸೇವೆ ಸಲ್ಲಿಸಲು ಬರುವ ವೈದ್ಯರಿಗೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಲದು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಮಾಜದಲ್ಲಿ ಎಲ್ಲ ವೃತ್ತಿಗಳಿಗಿಂತ ಪಶು ವೈದ್ಯರಾಗಿ ಸೇವೆ ಸಲ್ಲಿಸುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ ಎಂದು ಅಕ್ಷತಾ ಚಾರಿಟಬಲ್ ಅಧ್ಯಕ್ಷ ಎಸ್.ಆರ್.ಎಸ್ ಡಾ.ವಿ.ದೇವರಾಜ್ ಅಭಿಪ್ರಾಯಪಟ್ಟರು. ನಗರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಶು ಇಲಾಖೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಿ
ಗ್ರಾಮೀಣ ಜನರ ಆರ್ಥಿಕತೆ ಹೆಚ್ಚಿಸುವಲ್ಲಿ ಹಾಗೂ ರೈತರ ಜೀವನ ಮಟ್ಟ ಸುಧಾರಣೆಯಲ್ಲಿ ಪಶುಸಂಗೋಪನೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಇಂತಹ ರಂಗದಲ್ಲಿ ಪಶು ವೈದ್ಯರಾಗಿ ಸೇವೆ ಸಲ್ಲಿಸಲು ಬರುವ ವೈದ್ಯರಿಗೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಲದು. ಮನುಷ್ಯನಿಗೆ ಆರೋಗ್ಯ ಹದಗೆಟ್ಟರೆ ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತವೆ. ಆದರೆ, ಮೂಕ ಪ್ರಾಣಿ-ಪಕ್ಷಿಗಳಲ್ಲಿ ಅನಾರೋಗ್ಯ ಕಂಡು ಬಂದಾಗ ಅವು ಹೇಳಿಕೋಳುವುದಿಲ್ಲ. ನಾವೇ ಅದನ್ನು ಕಂಡು ಪಶು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಒದಗಿಸಬೇಕಿದೆ ಎಂದು ಹೇಳಿದರು. ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ರಂಗಪ್ಪ ಮಾತನಾಡಿ, ಮೊದಲಬಾರಿಗೆ ಪಶು ಇಲಾಖೆಯ ವೈದ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಸಿಬ್ಬಂದಿಯ ಸೇವೆಯನ್ನು ಸ್ಮರಿಸಿ, ಸನ್ಮಾನಿಸುತ್ತಿರುವ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಎಂಬಿಬಿಎಸ್ ತೇರ್ಗಡೆ ಹೊಂದಿದ ಪಶು ಇಲಾಖೆಯ ಸೇವೆ ಸಲ್ಲಿಸುತ್ತಿರುವ ವೈದ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ನಿವೃತ್ತಿ ಹೊಂದಿದ ಜಾನುವಾರ ಅಧಿಕಾರಿ ಶಾರದಂಭ, ಮುರಳಿಧರ್, ಎಂ.ಎಲ್.ಸೀತಾರಾಂ ಅವರಿಗೆ ಸನ್ಮಾನಿಸಲಾಯಿತು.ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಚಿಕ್ಕಬಳ್ಳಾಪುರ ತಾಲ್ಲೂಕಿನ ಚದಲುಪುರ ಗ್ರಾಮದ ಶಶಿಕಿರಣ್ ಅವರು ಖೋಖೋ ಕ್ರೀಡೆಯಲ್ಲಿ ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಸನ್ಮಾನಿಸಲಾಯಿತು. ಪಶು ಇಲಾಖೆಯಿಂದ ಎಸ್‍ಆರ್ ಎಸ್ ಡಾ.ವಿ.ದೇವರಾಜ್ ರಿಗೆ ಸನ್ಮಾನಿಸಲಾಯಿತು. ಈ ವೇಳೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಹರೀಶ್, ಪಶು ವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಲ್ಲಬಕಾಶ್, ಪದಾಧಿಕಾರಿಗಳಾದ ಗುರುನಾಥ್, ಶ್ರೀನಿವಾಸ್, ಸುಧಾಕರ್ ಸೇರಿದಂತೆ ರೈತರು, ಇಲಾಖೆಯ ವೈದ್ಯರು, ಸಿಬ್ಬಂದಿ ಇದ್ದರು.