ಅಂಧ-ಅನಾಥರ ಸೇವೆಯೇ ದೇವರ ಸೇವೆ: ಕಲ್ಲಯ್ಯಜ್ಜ

| Published : Feb 13 2025, 12:51 AM IST

ಸಾರಾಂಶ

ಅಂಧ, ಅನಾಥರು ಸೇರಿದಂತೆ ಸಂಕಷ್ಟದಲ್ಲಿರುವವರ ಸೇವೆಯೇ ದೇವರ ನಿಜವಾದ ಸೇವೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಅಂಧ, ಅನಾಥರು ಸೇರಿದಂತೆ ಸಂಕಷ್ಟದಲ್ಲಿರುವವರ ಸೇವೆಯೇ ದೇವರ ನಿಜವಾದ ಸೇವೆ ಎಂದು ಗದಗಿನ ವೀರೇಶ್ವರ ಪುಣಾಶ್ರಮದ ಪಂಡಿತ ಕಲ್ಲಯ್ಯಜ್ಜ ಹೇಳಿದ್ದಾರೆ.

ನಗರದ ತಾಲೂಕು ಕ್ರೀಡಾಂಗಣದ ಬಯಲು ರಂಗಮಂದಿರದಲ್ಲಿ‌ ಪಂಡಿತ ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯಸ್ಮರಣೆ, ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ 14ನೇ ಪುಣ್ಯಸ್ಮರಣೆ ಅಂಗವಾಗಿ ಹಾಗೂ ವೀರೇಶ್ವರ ಪುಣ್ಯಾಶ್ರಮದ ಅಂಧ - ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಡಾ. ಪಂಡಿತ ಕಲ್ಲಯ್ಯಜ್ಜನವರ ಪಂಚ ತುಲಾಭಾರ ಹಾಗೂ ಸಂಗೀತ ಸಮಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೀರೇಶ್ವರ ಪುಣ್ಯಾಶ್ರಮಕ್ಕೆ ದವಸ, ಧಾನ್ಯ, ಬೆಳ್ಳಿ, ಬಂಗಾರ ಕೊಡಿ ಅಂತ ನಾ ಕೇಳುವುದಿಲ್ಲ. ಬದಲಾಗಿ ಅಂಧರು, ಅನಾಥರು, ಭಿಕ್ಷೆ ಬೇಡುವವರು ಕಂಡರೆ ನನ್ನ ಆಶ್ರಮಕ್ಕೆ ತಂದು ಬಿಡಿ. ಇದೇ ನೀವು ಕೊಡುವ ದಾನ. ಇದೇ ನಾನು ನಿಮ್ಮಲ್ಲಿ ಕೇಳುವುದು. ಅವರ ಸೇವೆಯೇ ದೈವ ಸೇವೆ ಅಂತ ನನ್ನ ಪುಟ್ಟರಾಜ ಗುರುಗಳು ಅವರಿಗಾಗಿ ಜೀವನವನ್ನೇ ಮುಡಿಪಿಟ್ಟರು. ನಾನು ಅದೇ ದಾರಿಯಲ್ಲಿ ಸಾಗುವೆ. ನಿಮ್ಮ ಭಕ್ತಿ ಸೇವೆ, ಸಂಗೀತ ಸೇವೆ ಸದಾ ನಡೆಯುತ್ತಿರಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯೆ ಹೇಮಲತಾನಾಯಕ ವೀರೇಶ್ವರ ಪುಣ್ಯಾಶ್ರಮದ ಅಭಿವೃದ್ಧಿಗೆ ₹ಹದಿನೈದು‌ ಸಾವಿರವನ್ನು‌ ಸ್ಥಳದಲ್ಲಿಯೇ ನೀಡಿದರು.

ಸಮಾಜ ಸೇವಕ ಸೋಮಶೇಖರ ಹಿಟ್ನಾಳ‌ ಮಾತನಾಡಿದರು.

ತಬಲಾದಲ್ಲಿ ಪಂಡಿತ್ ರಾಜೇಂದ್ರ ನಾಕೋಡ್, ಸಿತಾರದಲ್ಲಿ ಪಂಡಿತ್ ಶಫಿಕಖಾನ್ ಮತ್ತು ಗಾಯನದಲ್ಲಿ ಪಂಡಿತ್ ಕುಮಾರ್ ಮರಡೂರ್, ಸದಾಶಿವ ಐಹೊಳೆ ಮತ್ತು ರವೀಂದ್ರ ಜಕಾತಿ ಅಂತಹ ಸಂಗೀತ ದಿಗ್ಗಜರು ತಮ್ಮ ರಾಗ -ಆಲಾಪದ ಮೂಲಕ ಪ್ರೇಕ್ಷಕರ ಮನಕ್ಕೆ ಸವಿಯುಣಿಸಿದರು. ಈ ಎಲ್ಲರೊಂದಿಗೆ ಕಾರ್ಯಕ್ರಮದ ರೂವಾರಿ ಪಂಡಿತ ಶಂಕರ ಬಿನ್ನಾಳ ಹಾರ್ಮೋನಿಯಂ ಸಾಥ್ ನೀಡಿದರು.

ಕೊಪ್ಪಳ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶರಣಪ್ಪಗೌಡ ಹದಿನೈದು ಸಾವಿರ ರೂಪಾಯಿಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶ್ಸ್ತಿ ಪುರಸ್ಕೃತ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಪತ್ರಕರ್ತ ಮಹೆಬೂಬ ಹುಸೇನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮನವರ,ಪ್ರಾಥಮಿಕ‌ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹೊಳಿಬಸಯ್ಯ, ಶಿವಪ್ಪ ಜೋಗಿ, ರಾಮಣ್ಣ ಶ್ಯಾವಿ, ಬಾಳಪ್ಪ ಕಾಳೆ, ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್, ಚಾಂದಪಾಷ ಕಿಲ್ಲೇದಾರ, ಬೀರಪ್ಪ ಅಂಡಗಿ, ಮಂಜುನಾಥ ಮ್ಯಾಗಳಮನಿ, ಮಾರುತಿ ಬಿನ್ನಾಳ, ನಾಗರಾಜ ಶ್ಯಾವಿ, ಕುಮಾರ ಬಿನ್ನಾಳ, ಮಂಜುನಾಥ ಬಿ., ಮತ್ತಿತರರು ಹಾಜರಿದ್ದರು.

ಹೇಮರಾಜಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಣೇಶ ಪೂಜಾರ ನಿರೂಪಿಸಿ, ಯೋಗಾನರಸಿಂಹ ಪಿ.ಕೆ‌. ಸ್ವಾಗತಿಸಿದರು. ನಾಗರಾಜನಾಯಕ ಡೊಳ್ಳಿನ ವಂದಿಸಿದರು.