ಕುಂದಗೋಳ:
ಯುವಕರು ದೇಶ ಸೇವೆಗಾಗಿ ಸೈನ್ಯ ಸೇರಬೇಕು, ಆ ನಿಟ್ಟಿನಲ್ಲಿ ಪಾಲಕರು ಪ್ರೋತ್ಸಾಹಿಸಬೇಕು. ದೇಶ ಸೇವೆ ಎಂಬುದು ಪವಿತ್ರ ಕರ್ತವ್ಯವಾಗಿದೆ ಎಂದು ನಿವೃತ್ತ ಯೋಧ ಬಸವರಾಜ ಗಣಿ ಹೇಳಿದರು.ಬಿಎಸ್‌ಎಫ್‌ನಲ್ಲಿ 22 ವರ್ಷ ಸೇವೆ ಮರಳಿ ಸ್ವಗ್ರಾಮ ಆಗಮಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪಂಜಾಬ್, ಕಾಶ್ಮೀರ, ಬಂಗಾಳ, ಗುಜರಾತ್ ಹಾಗೂ ತ್ರಿಪುರಾದಲ್ಲಿ ಸೇವೆ ಮಾಡಿ ಬಂದ ನನಗೆ ಗ್ರಾಮದ ಯುವಕರು, ಹಿರಿಯರು, ತಾಯಂದಿರು, ಗ್ರಾಮಸ್ಥರೆಲ್ಲರೂ ತೋರಿಸುತ್ತಿರುವ ಪ್ರೀತಿಗೆ ಚಿರಋಣಿ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಪೋಲಿಸ್ ಅಧಿಕಾರಿ ನವೀನ ಜಕ್ಕಲಿ ಮಾತನಾಡಿ, ಸೈನಿಕ ಎಂದರೆ ಉದ್ಯೋಗವಲ್ಲ, ಅದು ಮಹತ್ವದ ಧ್ಯೇಯವಾಗಿದ್ದು, ಕೆಲವರಿಗೆ ಮಾತ್ರ ದೇಶ ಸೇವೆಯ ಭಾಗ್ಯ ದೊರೆಯುತ್ತದೆ. ಸೈನಿಕರು ತಮ್ಮ ತಾರುಣ್ಯವನ್ನು ದೇಶ ಸೇವೆಗಾಗಿ ತ್ಯಾಗ ಮಾಡಿರುತ್ತಾರೆಯೇ ಅವರಿಗೆ ಸದಾ ಗೌರವ ನೀಡುವಂತೆ ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ ಕುಂದಗೋಳ ಶಿವಾನಂದ ಮಠದ ಶಿವಾನಂದ ಶ್ರೀ, ಅಭಿನವ ಬಸವಣ್ಣಜ್ಜನವರು ಆಶೀರ್ವಚನ ನೀಡಿದರು. ನಿವೃತ್ತ ಶಿಕ್ಷಕ ಎಸ್.ಪಿ. ಹಾನಗಲ್ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಯೋಧ ಎಸ್.ಪಿ. ಪಾಟೀಲ ಹಾಗೂ ಓಲಂಪಿಕ್ ಪಟು ಅನನ್ಯಾ ಹಿರೇಮಠ ಮಾತನಾಡಿದರು.
ಈ ವೇಳೆ ಯೋಧನ ತಂದೆ ಈರಪ್ಪ ಗಣಿ, ತಾಯಿ ಯಲ್ಲಮ್ಮ ಗಣಿ, ಪತ್ನಿ ಅನ್ನಪೂರ್ಣ ಹಾಗೂ ಚಂದ್ರಶೇಖರ ಬಿಚಗತ್ತಿ, ಎಸ್.ಪಿ. ಹಾನಗಲ್, ಈಶ್ವರಗೌಡ ಹಿರೇಗೌಡ್ರ, ವಿ.ಎಸ್. ಮಸಾಲಿ, ಅಂಜುಮಾ ನದಾಫ, ಎಚ್.ಬಿ. ಪಾಟೀಲ, ಸಂಜೀವ ಉಪಾಧ್ಯಯ, ಯೋಗೀಶ ಹಿರೇಮಠ, ಬಿ.ಆರ್. ಬಡ್ನಿ ಚಕ್ರಸಾಲಿ, ಸಿದ್ದನಗೌಡ್ರ ಮರಿಗೌಡ್ರ, ಯಲ್ಲಪ್ಪ ಮೆಗುಂಡಿ, ಮಾಜಿ ಸೈನಿಕರು, ಶಾಲಾ ಮಕ್ಕಳು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಂಜುನಾಥ ಕಟಗಿ ಸ್ವಾಗತಿಸಿದರು. ಮಂಜುನಾಥ ಬಾರಕೇರ ನಿರೂಪಿಸಿದರು.