ಸಾರಾಂಶ
ಸಮಾಜದಲ್ಲಿ ಮೂಲಸೌಕರ್ಯ ವಂಚಿತರು ತುಂಬಾ ಜನರಿದ್ದಾರೆ. ಅಂತಹವರನ್ನು ಗುರುತಿಸಿ ಕೈಲಾದ ಸೇವೆ ಸಲ್ಲಿಸುವುದು ಎಲ್ಲರ ಜವಾಬ್ದಾರಿಯಾಗಿದೆ.
ತಿಪಟೂರು: ಸಮಾಜದಲ್ಲಿರುವ ಅತೀ ದುರ್ಬಲ ಮತ್ತು ನಿರ್ಗತಿಕರನ್ನು ಗುರುತಿಸಿ ವಾತ್ಸಲ್ಯ ಕಾರ್ಯಕ್ರಮದಡಿ ಸೂರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಅವರು ಇತರರಂತೆ ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳುವ ಕೆಲಸವನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಾಡಲಾಗುತ್ತಿದೆ ಎಂದು ಕ್ಷೇಮವನ ಹಾಗೂ ಜ್ಞಾನವಿಕಾಸ ಯೂಟ್ಯೂಬ್ ಚಾನಲ್‌ನ ಸಂಚಾಲಕಿ ಶ್ರದ್ಧಾ ಅಮಿತ್ ತಿಳಿಸಿದರು.
ತಾಲೂಕಿನ ಸಾರ್ಥವಳ್ಳಿ ಹೋಬಳಿ ಬ್ಯಾಡರಹಳ್ಳಿ ಗ್ರಾಮದ ಹನುಮಂತಮ್ಮ ಹಾಗೂ ಹಾಲೇನಹಳ್ಳಿ ಗ್ರಾಮದ ತಾಯಮ್ಮ ಎಂಬುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮೂಲಸೌಕರ್ಯ ವಂಚಿತರು ತುಂಬಾ ಜನರಿದ್ದಾರೆ. ಅಂತಹವರನ್ನು ಗುರುತಿಸಿ ಕೈಲಾದ ಸೇವೆ ಸಲ್ಲಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮಾತೃಶ್ರೀ ಹಾಗೂ ಪೂಜ್ಯರ ಆಶಯದಂತೆ ನಿರಾಶ್ರಿತರಿಗೆ ಹಾಗೂ ಕಡು ಬಡವರನ್ನು ಗುರುತಿಸಿ ಅವರಿಗೆ ವಾತ್ಸಲ್ಯ ಕಾರ್ಯಕ್ರಮದಲ್ಲಿ ತಿಂಗಳ ಮಾಶಾಸನ, ವಾತ್ಸಲ್ಯ ಕಿಟ್, ವಾತ್ಸಲ್ಯ ಮಿಕ್ಸ್, ಮನೆ, ಶೌಚಾಲಯ ರಿಪೇರಿ, ಮನೆ ರಚನೆಯಂತಹ ಕೆಲಸಗಳನ್ನು ನಡೆಸಿ ಅವರಿಗೆ ಸೂರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಪೂಜ್ಯ ವೀರೆಂದ್ರ ಹೆಗಡೆಯವರು ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಶ್ರೀಸಾಮಾನ್ಯರ ಬದುಕನ್ನು ಹಸನಗೊಳಿಸುವಂತಹ ಕೆಲಸ ಮಾಡುತ್ತಿದ್ದು, ಈ ಎಲ್ಲಾ ಉತ್ತಮ ಯೋಜನೆಗಳಿಗೆ ಜನರಿಂದ ಸ್ಪಂದನೆ ಸಿಗುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಪ್ರಾದೇಶಿಕ ನಿರ್ದೇಶಕ ಎಂ. ಶೀನಪ್ಪ, ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ತಾಲೂಕು ಯೋಜನಾಧಿಕಾರಿ ಕೆ. ಉದಯ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ, ಮೇಲ್ವಿಚಾರಕ ಪ್ರದೀಪ್ ಸೇರಿ ಸೇವಾ ಪ್ರತಿನಿಧಿಗಳು, ವಿಎಲ್‌ಇಗಳು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.